ಚೆನ್ನೈ: ಖ್ಯಾತ ತಮಿಳು ಲೇಖಕ ಪೆರುಮಾಳ್ ಮುರುಗನ್ ಅವರ ವಿರುದ್ಧದ ಕ್ರಿಮನಲ್ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಪೆರುಮಾಳ್ ಮುರುಗನ್ ಅವರ ಕಾದಂಬರಿ 'ಮಾಧುರ್ ಬಾಹನ್' (ಅರ್ಧ ನಾರೀಶ್ವರ) ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಆರೋಪಿ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿತ್ತು. ಸುಮಾರು ಒಂದೂವರೆ ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಮದ್ರಾಸ್ ಹೈಕೋರ್ಟ್ ತಮಿಳು ಲೇಖಕನ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿದೆ.
ಪೆರುಮಾಳ್ ಮುರುಗನ್ ನಿರಾತಂಕವಾಗಿ ಸಾಹಿತ್ಯ ರಚನೆ ಮುಂದುವರೆಸಬಹುದು ಎಂದು ಹೇಳಿರುವ ಕೋರ್ಟ್, ಆರ್‌ಡಿಒ ಸಮ್ಮುಖದಲ್ಲಿ ನಡೆಸಲಾದ ಸಂಧಾನಕ್ಕೆ ಕಿಮ್ಮತ್ತು ಕೊಡಬೇಕಿಲ್ಲವೆಂದು ಸ್ಪಷ್ಟಪಡಿಸಿದೆ. ಅಲ್ಲದೆ, “ಬೇಕಿದ್ದವರು ಪುಸ್ತಕ ಓದಿ, ಇಲ್ಲವೇ ಬಿಸಾಡಿ. ಸಾಹಿತಿಯ ಮೇಲೆ ಬರೆಯದಂತೆ ಒತ್ತಡ ಹೇರಲು ಹೋಗಬೇಡಿ” ಎಂದೂ ತಾಕೀತುಮಾಡಿದೆ.
ನ್ಯಾಯಾಲಯದ ತೀರ್ಪಿನ ಬಗ್ಗೆ ಸಂತಸ ವ್ಯಕ್ತ ಪಡಿಸಿರುವ ಮುರುಗನ್, ನಾನು ಆ ತೀರ್ಪಿನಲ್ಲಿ ಹೇಳಿದ ಕೊನೆಯ ಸಾಲನ್ನು ಪುನರುಚ್ಛರಿಸುತ್ತಿದ್ದೇನೆ. "ಲೇಖಕನಿಗೆ ಯಾವುದು ಇಷ್ಟವೋ ಅದನ್ನು ನಿರಾತಂಕವಾಗಿ ಬರೆಯಲಿ. ನಾನು ಮತ್ತೆ ಬಂದಿದ್ದೇನೆ. ಈ ಕ್ಷಣವನ್ನು ನಾನು ಸಂತೋಷದಿಂದ ಕಳೆಯಲು ಇಷ್ಟ ಪಡುತ್ತೇನೆ. ನನಗೆ ಬೆಂಬಲವಾಗಿ, ನನ್ನೊಂದಿಗೆ ನಿಂತ ಎಲ್ಲ ಸ್ನೇಹಿತರಿಗೂ ಧನ್ಯವಾದಗಳು. ನಾನು ಹೊಸ ಹುಮ್ಮಸ್ಸಿನಿಂದ ಮತ್ತೆ ಬರೆಯಲು ಶುರು ಮಾಡುತ್ತೇನೆ ಎಂದು ಹೇಳಿದ್ದಾರೆ.