ನವದೆಹಲಿ: 341 ಕೋಟಿ ರುಪಾಯಿ ನೀರಿನ ಮೀಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕಿ ಶೀಲಾ ದಿಕ್ಷಿತ್ ಅವರಿಗೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಬುಧವಾರ ನೋಟಿಸ್ ನೀಡಿದೆ.
2011ರಲ್ಲಿ ಸುಮಾರು 2.5 ಲಕ್ಷ ನೀರಿನ ಮೀಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ನಾವು ಶೀಲಾ ದಕ್ಷಿತ್ ಅವರಿಗೆ ನಾವು ನೋಟಿಸ್ ನೀಡಿದ್ದೇವೆ ಮತ್ತು ತನಿಖೆಗೆ ಸಹಕರಿಸುವಂತೆ ಸೂಚಿಸಿರುವುದಾಗಿ ಎಸಿಬಿ ಮುಖ್ಯಸ್ಥ ಎಂ.ಕೆ.ಮೀನಾ ಅವರು ತಿಳಿಸಿದ್ದಾರೆ.
ಮೀಟರ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರ ಪ್ರಕರಣವನ್ನು ಎಸಿಬಿ ತನಿಖೆಗೆ ವಹಿಸಿದೆ. ಅಲ್ಲದೆ, ಈಗಾಗಲೇ ಮೂವರು ಅಪರಿಚಿತರ ಮೇಲೂ ಎಫ್ಐಆರ್ ದಾಖಲಿಸಿದೆ. ಮಾಜಿ ಸಿಎಂ ಶೀಲಾ ದೀಕ್ಷಿತ್ ಅವರಿಗೆ ನೋಟಿಸ್ ಜಾರಿಗೊಳಿಸಿರುವುದನ್ನು ಖಚಿತ ಪಡಿಸಿರುವ ಎಸಿಬಿಯ ವಿಶೇಷ ಪೊಲೀಸ್ ಆಯುಕ್ತ ಎಂ.ಕೆ. ಮೀನಾ, ಜಲಮಂಡಳಿಯ ಮುಖ್ಯಸ್ಥೆ ಕೂಡ ಆಗಿದ್ದ ಶೀಲಾ ದೀಕ್ಷಿತ್ ಅವರು ಪ್ರಕರಣಕ್ಕೆ ಸಂಬಂಧಿಸಿ ಉತ್ತರದಾಹಿಯಾಗಿದ್ದಾರೆ. ಹೀಗಾಗಿ ನೋಟಿಸ್ ನೀಡಲಾಗಿದೆ ಎಂದು ಹೇಳಿದ್ದಾರೆ.
ಸಿಆರ್ಪಿಸಿ ಸೆಕ್ಷನ್ 160ರ ಪ್ರಕಾರ ಶನಿವಾರ ನೋಟಿಸ್ ನೀಡಿರುವುದಾಗಿ ಮೂಲಗಳು ಮಾಹಿತಿ ನೀಡಿವೆ. ಅಲ್ಲದೆ, ಈ ಪ್ರಕರಣದ ಹಿನ್ನೆಲೆಯಲ್ಲಿ ಒಂದಿಷ್ಟು ದಾಖಲೆಗಳನ್ನು ಪರಿಶೀಲಿಸಬೇಕಿದೆ. ಅಲ್ಲದೇ, ತನಿಖೆಗಾಗಿ ತಮ್ಮನ್ನು ವಿಚಾರಣೆಗೆ ಒಳಪಡಿಸಬೇಕಾಗುತ್ತದೆ ಎಂದು ಹೇಳಿದೆ ಎನ್ನಲಾಗಿದೆ.