ನವದೆಹಲಿ: ಬಹುಕೋಟಿ ಹಗರಣದ ಆರೋಪಿ ಸಹರಾ ಸಮೂಹದ ಮುಖ್ಯಸ್ಥ ಸುಬ್ರತಾ ರಾಯ್ ಅವರ ಪೆರೋಲ್ ಅವಧಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ಆಗಸ್ಟ್ 3ರವರೆಗೆ ವಿಸ್ತರಿಸಿದೆ.
ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ನೇತೃತ್ವದ ಸುಪ್ರೀಂ ಪೀಠ ಸುಬ್ರತಾ ರಾಯ್ ಪೆರೋಲ್ ಅವಧಿಯನ್ನು ಮತ್ತೆ ವಿಸ್ತರಿಸಿದೆ. ಅಲ್ಲದೆ ಹೆಚ್ಚುವರಿಯಾಗಿ 300 ಕೋಟಿ ರುಪಾಯಿಯನ್ನು ಆಗಸ್ಟ್ 3ರೊಳಗೆ ಜಮಾ ಮಾಡುವಂತೆ ಸೂಚಿಸಿದೆ.
ಮಾನವೀಯತೆ ಆಧಾರದ ಮೇಲೆ ಅವರ ಪೆರೋಲ್ ಅವಧಿಯನ್ನು ವಿಸ್ತರಿಸಲಾಗಿದ್ದು, ಅದನ್ನು ದುರ್ಬಳಕೆ ಮಾಡಿಕೊಳ್ಳಬೇಡಿ ಎಂದು ಸಹರಾ ಮುಖ್ಯಸ್ಥನಿಗೆ ಕೋರ್ಟ್ ಎಚ್ಚರಿಸಿದೆ.
ತಾಯಿ ನಿಧನದ ಹಿನ್ನೆಲೆಯಲ್ಲಿ ಕಳೆದ ಮೇ 6ರಂದು ರಾಯ್ ಯನ್ನು ಪೆರೋಲ್ ಮೇಲೆ ಕೋರ್ಟ್ ಬಿಡುಗಡೆ ಮಾಡಿತ್ತು. ಬಳಿಕ ಅದನ್ನು ಮತ್ತೆ ಎರಡು ತಿಂಗಳ ಕಾಲ ವಿಸ್ತರಿಸಿತ್ತು.
ವಸತಿ ಯೋಜನೆ ಹೆಸರಿನಲ್ಲಿ ಸಾರ್ವಜನಿಕ ಹೂಡಿಕೆದಾರರನ್ನು ವಂಚಿಸಿ, ಹೂಡಿಕೆ ಹಣ ಹಿಂದಿರುಗಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಜಾಮೀನುರಹಿತ ವಾರಂಟ್ ಹೊರಡಿಸಿ, ಬಂಧನಕ್ಕೆ ಆದೇಶಿಸಿತ್ತು. ಇದಾದ ಬಳಿಕ 2 ದಿನಗಳಿಂದ ತಲೆ ಮರೆಸಿಕೊಂಡಿದ್ದ 65 ವರ್ಷ ವಯಸ್ಸಿನ ಸುಬ್ರತಾ ರಾಯ್ ಬಳಿಕ ಲಕ್ನೋದಲ್ಲಿ ಪೊಲೀಸರ ಎದುರು ಶರಣಾಗಿ ಜೈಲುಪಾಲಾಗಿದ್ದರು.