ದೇಶ

ನಗರದ ಬೀದಿಗಳಲ್ಲಿ 8 ಸಿಂಹಗಳ ಸುತ್ತಾಟ, ಬೆಚ್ಚಿ ಬಿದ್ದ ಗುಜರಾತ್ ಜನತೆ

Srinivasamurthy VN

ಅಹ್ಮದಾಬಾದ್: ಗುಜರಾತ್ ನ ಅತ್ಯಂತ ಜನನಿಭಿಡ ಜುನಾಗಡ್ ನಗರದ ಪ್ರಮುಖ ಬೀದಿಗಳಲ್ಲಿ ಮಂಗಳವಾರ ರಾತ್ರಿ ಬರೊಬ್ಬರಿ 8 ಸಿಂಹಗಳು ರಾಜಾರೋಷವಾಗಿ ಸುತ್ತಾಡುತ್ತಿದ್ದು, ನಗರ  ವಾಸಿಗಳು ತೀವ್ರ ಪ್ರಾಣ ಆತಂಕದಲ್ಲಿದ್ದಾರೆ.

ರಾಜಧಾನಿ ಅಹ್ಮದಾಬಾದ್ ನಿಂದ ಸುಮಾರು 300 ಕಿಮೀ ದೂರದಲ್ಲಿ ಜುನಾಗಡ್ ನಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ರಾತ್ರಿ ಸುಮಾರು 9.30 ಸುಮಾರಿನಲ್ಲಿ 2 ಮರಿಗಳು ಸೇರಿದಂತೆ ಒಟ್ಟು 8  ಸಿಂಹಗಳು ನಗರದ ಬೀದಿಯಲ್ಲಿ ಸುತ್ತಾಡಿವೆ. ಸ್ಥಳೀಯ ವ್ಯಕ್ತಿಯೊಬ್ಬರು ಸಿಂಹಗಳ ಸುತ್ತಾಟವನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡು ವಾಟ್ಸಪ್ ನಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ  ಇದೀಗ ಗುಜರಾತ್ ನಾದ್ಯಂತ ವ್ಯಾಪಕವಾಗಿ ಹರಿದಾಡುತ್ತಿದ್ದು, ರಾತ್ರೋ ರಾತ್ರಿ ಸಿಂಹಗಳ ಸುತ್ತಾಟದ ವಿಡಿಯೋ ವೈರಲ್ ಆಗಿದೆ.

ಇನ್ನು ಮತ್ತೊಂದ ಪ್ರಕರಣದಲ್ಲಿ ಗಿರ್ ಸಂರಕ್ಷಿತಾರಣ್ಯ ಪ್ರದೇಶದ ಸಮೀಪವಿರುವ ಅಮ್ರೇಲಿ ಜಿಲ್ಲೆಯ ಸಮೀಪ ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆಸಿದ ಮೂರು ಸಿಂಹಗಳು ಆತನನ್ನು  ಗಂಭೀರವಾಗಿ ಗಾಯಗೊಳಿಸಿವೆ. ಸಿಂಹಗಳ ದಾಳಿಯಿಂದ ಹೇಗೋ ರಕ್ಷಿಸಿಕೊಂಡ ವ್ಯಕ್ತಿಯನ್ನು ಬಳಿಕ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂಲಗಳ ಪ್ರಕಾರ  ಕುರಿಗಳನ್ನು ಮೇಯಿಸಿಕೊಂಡು ತನ್ನ ಗ್ರಾಮಕ್ಕೆ ವಾಪಸ್ ಆಗುವ ವೇಳೆ ಸಿಂಹಗಳು ಈತನ ಮೇಲೆ ದಾಳಿ ಮಾಡಿವೆ ಎಂದು ಹೇಳಲಾಗುತ್ತಿದೆ.

ಗುಜರಾತ್ ನಲ್ಲಿ ನಿನ್ನೆ ಒಂದೇ ದಿನ ಸಿಂಹಗಳ ದಾಳಿಯಲ್ಲಿ ಮೂವರು ಗಾಯಗೊಂಡ ಕುರಿತು ವರದಿ ದಾಖಲಾಗಿದ್ದು, ಕಳೆದ ಜೂನ್ ತಿಂಗಳಲ್ಲಿ ಸಿಂಹಗಳ ದಾಳಿಯಿಂದಾಗಿ ಓರ್ವ ಮಹಿಳೆ  ಸಾವನ್ನಪ್ಪಿದ್ದಳು. ಇದೀಗ ಮತ್ತೆ ಸಿಂಹಗಳು ಸುದ್ದಿಯಲ್ಲಿದ್ದು, ಅದೂ ಕೂಡ ಜನನಿಭಿಡ ನಗರದಲ್ಲಿ ರಾಜಾರೋಷವಾಗಿ ಸುತ್ತಾಟ ನಡೆಸುವ ಮೂಲಕ ಜನರ ನಿದ್ದೆ ಕದ್ದಿವೆ.

SCROLL FOR NEXT