ಕೋಲ್ಕತಾ: ಟಿಎಂಸಿ ಕೌನ್ಸಿಲರ್ ನ ಹಣ ವಸೂಲಿ ದಂಧೆಗೆ ಕಡಿವಾಣ ಹಾಕುವಂತೆ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಕರೆ ಮಾಡಿದ್ದು, ಹಣ ವಸೂಲಿ ದಂಧೆಯಲ್ಲಿ ಭಾಗಿಯಾಗಿದ್ದ ಟಿಎಂಸಿ ಯ ಶಾಸಕನ ಬಂಧನಕ್ಕೆ ಕಾರಣವಾಗಿದೆ.
ಬಾಂಗ್ಲಾ ಪ್ರಧಾನಿ ಕರೆಯ ಪರಿಣಾಮ ಮಮತಾ ಬ್ಯಾನರ್ಜಿ ಸೂಚನೆ ನೀಡಿದ ನಂತರ ಟಿಎಂಸಿ ಕೌನ್ಸಿಲರ್ ಅನಿಂದ್ಯ ಚಟರ್ಜಿಯನ್ನು ಬಂಧಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಿಎಂಸಿ ನಾಯಕರೊಬ್ಬರು, ಸಿಂಡಿಕೇಟ್ ರಾಜ್ ಬಗ್ಗೆ ಮಮತಾ ಬ್ಯಾನರ್ಜಿ ಪದೇ ಪದೇ ಎಚ್ಚರಿಸುತ್ತಿದ್ದರು. ಆದರೆ ಅದನ್ನು ಪಕ್ಷದ ಮುಖಂಡರು ಲಘುವಾಗಿ ಪರಿಗಣಿಸಿದ್ದರು, ಈಗ ಅನಿಂದ್ಯ ಚಟರ್ಜಿಯ ಬಂಧನ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದೆ ಎಂದು ಹೇಳಿದ್ದಾರೆ.
ಕೌನ್ಸಿಲರ್ ಅನಿಂದ್ಯ ಚಟರ್ಜಿ, ಬಿಲ್ಡರ್ ಗಳ ಕಟ್ಟಡ ನಿರ್ಮಾಣ ಯೋಜನೆಗಳಿಗೆ ಅನುಮತಿ ನೀಡುವುದಕ್ಕೆ ಹಣದ ಬೇಡಿಕೆ ಇಡುತ್ತಿದ್ದ, ಅದರಂತೆಯೇ, ಸಂತೋಷ್ ಲೋಧ್ ಎಂಬುವವರಿಗೆ 20 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದ, ಆದರೆ ಇದಕ್ಕೆ ಒಪ್ಪದ ಕಾರಣ ಅನಿಂದ್ಯ ಚಟರ್ಜಿ ಕಿರುಕುಳ ನೀಡಿದ್ದರಿಂದ ಸಂತೋಷ್ ಲೋಧ್ ಮೆದುಳಿನ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ಇದಕ್ಕೂ ಮೊದಲು ಅನಿಂದ್ಯ ಚಟರ್ಜಿ ಹಣದ ಬೇಡಿಕೆ ಇಡುತ್ತಿರುವುದರ ಬಗ್ಗೆ ಟಿಎಂ ಸಿ ಮುಖಂಡ, ಲೋಕಸಭಾ ಸದಸ್ಯ ಸುದೀಪ್ ಬ್ಯಾನರ್ಜಿ ಗೆ ಮಾಹಿತಿ ನೀಡಿದ್ದಾರೆ. ಇದರಿಂದ ಏನೂ ಪ್ರಯೋಜನವಾಗದೆ, ಮತ್ತಷ್ಟು ಕಿರುಕುಳ ಎದುರಿಸಿದ ಸಂತೋಷ್ ಲೋದ್ ಮೆದುಳಿನ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ಇದೆ ರೀತಿ ಬಿಧಾನ್ ನಗರ್ ನ ಅಶೋಕ್ ಮುಖರ್ಜಿಗೂ ಹಣದ ಬೇಡಿಯೆಕ್ ಇಟ್ಟಿದ್ದಾರೆ, ಆದರೆ ಅಶೋಕ್ ಮುಖರ್ಜಿ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದು, ಈ ಬಗ್ಗೆ ಶೇಖ್ ಹಸಿನಾಗೆ ತಿಳಿಸಿದ್ದಾರೆ. ನಂತರ ಬಾಂಗ್ಲಾ ದೇಶದ ಉಪ ಹೈಕಮಿಷನ್ ಮಮತಾ ಬ್ಯಾನರ್ಜಿಗೆ ಟಿಎಂಸಿ ಕೌನ್ಸಿಲರ್ ನ ಹಣ ವಸೂಲಿ ದಂಧೆಯ ಬಗ್ಗೆ ಮಾಹಿತಿ ನೀಡಿದೆ. ಇದರ ಬೆನ್ನಲ್ಲೇ ಶೇಖ್ ಹಸೀನಾ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಕರೆ ಮಾಡಿ ಟಿಎಂಸಿ ನಾಯಕನ ಹಣ ವಸೂಲಿ ದಂಧೆಗೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ. ಈಗ ಮಮತಾ ಬ್ಯಾನರ್ಜಿಗೆ ಕೋಲ್ಕತಾ ವಿಚಾರದಲ್ಲಿ ಬಾಂಗ್ಲಾ ಪ್ರಧಾನಿ ಮಧ್ಯಪ್ರವೇಶ ಮಾಡಿರುವುದನ್ನು ಪ್ರತಿಪಕ್ಷಗಳು ಚರ್ಚಾಸ್ಪದ ವಿಷಯವನ್ನಾಗಿಸುತ್ತಾರೆ ಎಂಬ ಆತಂಕ ಉಂಟಾಗಿದೆ.