ಅಮೃತಸರ: ತಮ್ಮ ಮಾತಿಗೆ ಬದ್ಧವಾಗಿ ನಡೆದುಕೊಂಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು (ಗುರುದ್ವಾರ ಹರ್ ಮಂದರ್ ಸಾಹಿಬ್) ಸ್ವರ್ಣಮಂದಿರದಲ್ಲಿ ಸೇವೆ ಮಾಡುವ ಮೂಲಕ ಸೋಮವಾರ ಪ್ರಾಯಶ್ಚಿತ್ತದ ಸೇವೆಯನ್ನು ಕೈಗೊಂಡಿದ್ದಾರೆ.
ಮೂಲಗಳು ತಿಳಿಸಿರುವ ಪ್ರಕಾರ, ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ ಇನ್ನಿತರೆ ನಾಯಕರು ಸ್ವರ್ಣಮಂದಿರಕ್ಕೆ ಹೋಗಿದ್ದು, ಇಲ್ಲಿನ ಭೋಜನ ಶಾಲೆಯಲ್ಲಿ ಪಾತ್ರೆಗಳನ್ನು ತೊಳೆಯುವ ಮೂಲಕ ಧಾರ್ಮಿಕ ಸ್ವಯಂ ಸೇವೆಯನ್ನು ಮಾಡಿದ್ದಾರೆಂದು ತಿಳಿದುಬಂದಿದೆ.
ಪ್ರಾಯಶ್ಚಿತ್ತತೆಯ ಸೇವಾ ಕೆಲಸದಲ್ಲಿ ಆಶಿಷ್ ಖೇತಾನ್, ವಕೀಲ ಹೆಚ್.ಎಸ್ ಫೂಲ್ಕಾ, ಆಪ್ ಸಂಸದ ಭಗವಂತ ಮಾನ್, ಸಾಧು ಸಿಂಗ್, ನಟಿ ಹಾಗೂ ಆಪ್ ಸದಸ್ಯರಾದ ಗುಲ್ ಪನಾಗ್ ಮತ್ತು ಗುರ್ ಪ್ರೀತ್ ಘುಗ್ಗಿ ಸೇರಿದಂತೆ ಇನ್ನಿತರರರು ಭಾಗಿಯಾಗಿದ್ದರು.
ಈ ಹಿಂದೆ ಆಮ್ ಆದ್ಮಿ ಪಕ್ಷವು ಯುವ ದಳ ಪ್ರಣಾಳಿಯ ಮುಖಪುಟದಲ್ಲಿ ಹರ್ ಮಂದರ್ ಸಾಹಿಬ್ (ಸ್ವರ್ಣ ಮಂದಿರ) ಚಿತ್ರ ಹಾಗೂ ಅದರ ಪಕ್ಕದಲ್ಲಿಯೇ ಪಕ್ಷದ ಚಿಹ್ನೆಯಾಗಿರುವ ಪೊರಕೆಯನ್ನು ಜತೆಜತೆಯಾಗಿರಿಸಿ ಪ್ರಕಟಿಸಿದ್ದರು. ಆಪ್ ಮಾಡಿದ ಈ ಅಚಾತುರ್ಯ ಸಿಖ್ಖರ ಧಾರ್ಮಿಕ ಭಾವನೆಗಳಿಗೆ ನೋವುಂಟಾಗುವಂತೆ ಮಾಡಿತ್ತು. ಈ ವಿಚಾರ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ಇದರಂತೆ ಪಕ್ಷದ ಮಾಡಿದ ತಪ್ಪಿಗೆ ಸ್ವರ್ಣ ಮಂದಿರದಲ್ಲಿ ಸೇವೆ ಸಲ್ಲಿಸುವ ಮೂಲಕ ಪ್ರಾಯಶ್ಚಿತ್ತದ ಸೇವಾ ಕಾರ್ಯ ಮಾಡುವುದಾಗಿ ಹೇಳಿದ್ದರು. ಇದರಂತೆ ಮಾತಿನ ಪ್ರಕಾರವೇ ನಡೆದುಕೊಂಡಿರುವ ಅವರು ಸ್ವರ್ಣ ಮಂದಿರದಲ್ಲಿ ಧಾರ್ಮಿಕ ಸ್ವಯಂ ಸೇವಾ ಕಾರ್ಯವನ್ನು ಕೈಗೊಂಡಿದ್ದಾರೆ.
ಸೇವೆ ಸಲ್ಲಿಸಿದ ಬಳಿಕ ಮಾತನಾಡಿರುವ ಅವರು, ಯುವ ಜನರಿಗಾಗಿ ಮಾಡಿದ ಪ್ರಣಾಳಿಯಲ್ಲಿ ತಿಳಿಯದೆಯೇ ಕೆಲ ತಪ್ಪುಗಳನ್ನು ಮಾಡಲಾಗಿದೆ. ನಮ್ಮ ತಪ್ಪಿಗೆ ಕ್ಷಮೆಯಾಚಿಸುತ್ತೇವೆ. ಇದೀಗ ಸ್ವರ್ಣಮಂದಿರದಲ್ಲಿ ಸೇವೆ ಸಲ್ಲಿಸುವ ಮೂಲಕ ಪ್ರಾಯಶ್ಚಿತ್ತತೆಯ ಸೇವೆಯನ್ನು ಮಾಡಿದ್ದೇವೆಂದು ಹೇಳಿದ್ದಾರೆ.