ದೇಶ

ಅರುಣಾಚಲ ಪ್ರದೇಶ: ವಿಶ್ವಾಸ ಮತ ಗೆದ್ದ ಮುಖ್ಯಮಂತ್ರಿ ಪೆಮಾ ಖಂಡು

Lingaraj Badiger
ಇಟಾನಗರ: ಅರುಣಾಚಲ ಪ್ರದೇಶದ ಅತ್ಯಂತ ಕಿರಿಯ ಮುಖ್ಯಮಂತ್ರಿ ಪೆಮಾ ಖಂಡು ಅವರು ಬುಧವಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದಾಗಿ ಅರುಣಾಚಲ ಪ್ರದೇಶದ 9ನೇ ಮುಖ್ಯಮಂತ್ರಿಯಾಗಿ ಕಳೆದ ಭಾನುವಾರ ಪ್ರಮಾಣವಚನ ಸ್ವೀಕರಿಸಿದ್ದ ಪೆಮಾ ಖಂಡು ಅವರು ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಿದರು. 44 ಕಾಂಗ್ರೆಸ್ ಶಾಸಕರು ಹಾಗೂ ಇಬ್ಬರು ಪಕ್ಷೇತರರು ಪೆಮಾ ಖಂಡು ಪರ ಮತ ಚಲಾಯಿಸಿದರೆ, 11 ಬಿಜೆಪಿ ಶಾಸಕರು .ಖಂಡು ವಿರುದ್ಧವಾಗಿ ಮತ ಚಲಾಯಿಸಿದರು.
ಗವರ್ನರ್ ತಥಾಗತ ರಾಯ್ ಅವರು ಇಂದು ವಿಶ್ವಾಸ ಮತ ಯಾಚನೆಮಾಡುವಂತೆ ಪೆಮಾ ಖಂಡು ಅವರಿಗೆ ಮಂಗಳವಾರ ರಾತ್ರಿ ಸೂಚನೆ ನೀಡಿದ್ದರು. ಅದರಂತೆ ಖಂಡು ವಿಶ್ವಾಸ ಮತಯಾಚಿಸಿ, ಗೆಲುವು ಸಾಧಿಸಿದ್ದಾರೆ.
ಸರ್ಕಾರಕ್ಕೆ ಬೆಂಬಲ ಸೂಚಿಸಿದ ನಬಮ್ ತುಕಿ ಮತ್ತು ಕಲಿಖೋ ಪೌಲ್ ಅವರಿಗೆ ಪೆಮಾ ಖಂಡು ಧನ್ಯವಾದ ಅರ್ಪಿಸಿದರು. ನಂತರ ರಾಜ್ಯದಲ್ಲಿರುವ 26 ಪ್ರಮುಖ ಬುಕಟ್ಟು ಸಮುದಾಯ ಮತ್ತು 100 ಕ್ಕೂ ಹೆಚ್ಚು ಉಪ ಬುಡಕಟ್ಟು ಸಮುದಾಯಗಳನ್ನು ಸಮಾನವಾಗಿ ಅಭಿವೃದ್ಧಿಗೊಳಿಸಲಾಗುವುದು. ಇದಕ್ಕಾಗಿ ಟೀಮ್ ಅರುಣಾಚಲ ಎಂಬ ತಂಡವನ್ನು ಕಟ್ಟಲು ತೀರ್ಮಾನಿಸಿದ್ದು, ಇದು ಅರುಣಾಲ ಪ್ರದೇಶದ ಅಭಿವೃದ್ಧಿಗಾಗಿ ಕೆಲಸ ಮಾಡಲಿದೆ ಎಂದು ಪೆಮಾ ಖಂಡು ವಿಧಾನ ಸಭೆಯಲ್ಲಿ ತಿಳಿಸಿದರು.
SCROLL FOR NEXT