ಬಸ್ ಯಾತ್ರೆ ಚಾಲನೆ ನೀಡುತ್ತಿರುವ ಸೋನಿಯಾ ಗಾಂಧಿ
ನವದೆಹಲಿ: ದೆಹಲಿಯಿಂದ ಕಾನ್ಪುರ್‌ವರೆಗೆ ಬಸ್ ಯಾತ್ರೆಗೆ ಶನಿವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಚಾಲನೆ ನೀಡಿದ್ದು, ಇದರೊಂದಿಗೆ ಮುಂದಿನ ವರ್ಷ ನಡೆಯುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಇಂದಿನಿಂದಲೇ ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸಿದೆ.
ದೆಹಲಿಯಿಂದ ಸುಮಾರು 600 ಕಿ.ಮೀ ದೂರದಲ್ಲಿರುವ ಕಾನ್ಪುರ್‌ವರೆಗೆ ಬಸ್ ಯಾತ್ರೆ ಹಮ್ಮಿಕೊಳ್ಳಲಾಗಿದ್ದು 27 ಸಾಲ್ ಯುಪಿ ಬೇಹಾಲ್ ಎನ್ನುವ ಶೀರ್ಷಿಕೆಯನ್ನು ಹೊಂದಿದೆ.
ಮೂರು ದಿನಗಳ ಈ ಬಸ್ ಯಾತ್ರೆಗೆ ದೆಹಲಿಯ ಪಕ್ಷದ ಕಚೇರಿಯಲ್ಲಿ ಚಾಲನೆ ನೀಡಲಾಗಿದ್ದು, ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಶೀಲಾ ದೀಕ್ಷಿತ್, ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ಹಾಗೂ ಹಿರಿಯ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಅವರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಯಾತ್ರೆ ಸಂದರ್ಭ ನಾಯಕರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಾರ್ವಜನಿಕ ರಂಗದ ಮುಖಂಡರನ್ನು ಭೇಟಿ ಮಾಡುವ ಉದ್ದೇಶವನ್ನು ದೀಕ್ಷಿತ್ ಹೊಂದಿದ್ದಾರೆ.
ಭಾರತದ ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಗದ್ದುಗೆ ಹಿಡಿಯಲೇಬೇಕು ಎಂದು ನಿರ್ಧರಿಸಿರುವ ಕಾಂಗ್ರೆಸ್, ಜನಮನವನ್ನು ತನ್ನತ್ತ ಸೆಳೆಯಲು ಈಗಿನಿಂದಲೇ ಶತಯತ್ನ ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ಶೀಲಾ ದೀಕ್ಷಿತ್ ಅವರ ಬಸ್ ಯಾತ್ರೆ ಮಹತ್ವದ್ದಾಗಿದೆ.
ರಾಹುಲ್ ಗಾಂಧಿ ಕಳೆದ ವಾರ 50, 000 ಕಾರ್ಯಕರ್ತರನ್ನು ಭೇಟಿ ಮಾಡಿದ್ದು, ಕಾಂಗ್ರೆಸ್ಗೆ ಮುಂಬರುವ ಚುನಾವಣೆಯಲ್ಲಿ ಬಹುಮತ ನೀಡಬೇಕೆಂದು ವಿನಂತಿಸಿದ್ದಾರೆ. ಆಗಸ್ಟ್ 2 ರಂದು ಸೋನಿಯಾ ಗಾಂಧಿ ಲಖನೌನಲ್ಲಿ ರೋಡ್ಷೋ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.