ರಾಮೇಶ್ವರಂ: ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ರಾಷ್ಟ್ರೀಯ ಸ್ಮಾರಕ ನಿರ್ಮಾಣಕ್ಕೆ ಅಬ್ದುಲ್ ಕಲಾಂ ಅವರ ಮೊದಲ ಪುಣ್ಯಸ್ಮರಣೆಯ ದಿನ(ಜು.27) ರಂದೇ ಶಂಕುಸ್ಥಾಪನೆ ನೆರವೇರಿದೆ.
ಪೇಯ್ ಕರಂಬು ನಲ್ಲಿ ಕಲಾಂ ಸಮಾಧಿಯ ಬಳಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಸ್ಮಾರಕ ನಿರ್ಮಾಣ ಕಾಮಗಾರಿ ಶೀಘ್ರವೇ ಪ್ರಾರಂಭವಾಗಲಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ ಮುಕ್ತಾಯಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕೇಂದ್ರ ನಗರಾಭಿವೃದ್ಧಿ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಎಂ.ವೆಂಕಯ್ಯ ನಾಯ್ಡು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆಯ ರಾಜ್ಯ ಸಚಿವ ರಾಧಾಕೃಷ್ಣನ್ ಹಾಗೂ ತಮಿಳುನಾಡು ಸರ್ಕಾರದ ಸಚಿವರು ಭಾಗವಹಿಸಿದ್ದರು.
ಮೊದಲನೇ ಪುಣ್ಯ ಸ್ಮರಣೆ ಅಂಗವಾಗಿ ಕಲಾಂ ಸಮಾಧಿ ಬಳಿ ಕಲಾಂ ಅವರ ಸಹಜ ಗಾತ್ರದ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಅಬ್ದುಲ್ ಕಲಾಂ ಅವರ ಸ್ಮಾರಕ ಮುಂದಿನ ಪೀಳಿಗೆಗೆ ಇಂತಹ ಮಹನೀಯ ವ್ಯಕ್ತಿಯೊಬ್ಬರು ಈ ಭೂಮಿಯಲ್ಲಿ ಜನಿಸಿದ್ದರು ಎಂಬುದನ್ನು ತಿಳಿಸುತ್ತದೆ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ. ಜು.27, 2015 ರಂದು ಅಬ್ದುಲ್ ಕಲಾಂ ಅವರು ಶಿಲ್ಲಾಂಗ್ ನ ಐಐಎಂ ನಲ್ಲಿ ಉಪನ್ಯಾಸ ನೀಡುತ್ತಿರಬೇಕಾದರೆ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದರು.