ಭೋಪಾಲ್: ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಇಬ್ಬರು ಮುಸ್ಲಿಂ ಮಹಿಳೆಯರಿಗೆ ಹಿಂದೂದಳ ಕಾರ್ಯಕರ್ತರು ಥಳಿಸಿರುವ ಘಟನೆ ಮಧ್ಯಪ್ರದೇಶದ ಮಂಡಸೌರ್ ರೈಲ್ವೇ ನಿಲ್ದಾಣಲ್ಲಿ ನಡೆದಿದೆ.
ಇಬ್ಬರು ಮಹಿಳೆಯರು ಗೋಮಾಂಸ ಸಾಗಿಸುತ್ತಿದ್ದಾರೆಂದು ಭಾವಿಸಿದ ವ್ಯಕ್ತಿಗಳು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲಿದ್ದ ಜನ ಯಾರೂ ಆ ಮಹಿಳೆಯರ ರಕ್ಷಣೆಗೆ ಧಾವಿಸಿಲ್ಲ. ಕೆಲವರು ಈ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.ಸ್ಥಳಕ್ಕೆ ಧಾವಿಸಿದ ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಮಹಿಳೆಯರಿಗೆ ಥಳಿಸುವುದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ.
ಮಹಿಳೆಯರ ಬಳಿ ಇದ್ದ 30 ಕೆಜಿ ಮಾಂಸ ದೊರಕಿದ್ದು, ಪಶು ವೈದ್ಯರಿಂದ ತಪಾಸಣೆ ಮಾಡಿಸಿದಾಗ ಅದು ಗೋಮಾಂಸವಲ್ಲ. ಕೋಣದ ಮಾಂಸ ಎಂಬುದು ಸ್ಪಷ್ಟವಾಗಿದೆ. ಆದರೆ ಈ ಮಾಂಸವನ್ನು ಮಾರಾಟ ಮಾಡಲು ಅನುಮತಿ ಇಲ್ಲದ ಕಾರಣ ಮಹಿಳೆಯರ ಮೇಲೆ ದೂರು ದಾಖಲಿಸಲಾಗಿದೆ. ಆದರೆ ಹಲ್ಲೆ ಮಾಡಿದವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಇನ್ನು ಪ್ರಕರಣದ ಬಗ್ಗೆ ಪ್ರತ್ರಿಕ್ರಿಯೆ ನೀಡಿರುವ ಮಧ್ಯಪ್ರದೇಶ ಗೃಹ ಸಚಿವ ಭೂಪಿಂದರ್ ಸಿಂಗ್ ಯಾರೋಬ್ಬರು ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಅಂಥ ಸನ್ನಿವೇಶ ಕಂಡು ಬಂದರೆ ಸಂಬಂಧ ಪಟ್ಟವರ ಗಮನಕ್ಕೆ ತರಬೇಕು. ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.