ಲಖನೌ: ಕಾಂಗ್ರೆಸ್ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಗೆಲುವಿಗಾಗಿ ಶೀಲಾ ದಿಕ್ಷಿತ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡಿರುವುದು ತಪ್ಪು ಬೆಳವಣಿಗೆ. ಅವರಿಗೆ ತುಂಬಾ ವಯಸ್ಸಾಗಿದ್ದು, ಗೆಲುವು ಸಾಧಿಸುವುದು ಕಷ್ಟ ಎಂದು ಭಾರತೀಯ ಜನತಾ ಪಕ್ಷ(ಬಿಜೆಪಿ) ಶುಕ್ರವಾರ ಹೇಳಿದೆ. ಅಲ್ಲದೆ ಅವರ ಬದಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನೇ ಸಿಎಂ ಅಭ್ಯರ್ಥಿ ಎಂದು ಘೋಷಿಸಬೇಕಿತ್ತು ಎಂದು ವ್ಯಂಗ್ಯವಾಡಿದೆ.
ಶೀಲಾ ದಿಕ್ಷಿತ್ ಅವರು ತುಂಬಾ ಹಿರಿಯ ವ್ಯಕ್ತಿ. ಹೀಗಾಗಿ ಸ್ವತಃ ರಾಹುಲ್ ಗಾಂಧಿ ಅವರೇ ಮುಂದೆ ಬಂದು ಸಿಎಂ ಅಭ್ಯರ್ಥಿಯಾಗಬೇಕು. ಅವರು ಯಾವತ್ತೂ ಪ್ರಧಾನಿಯಾಗಲು ಸಾಧ್ಯವಿಲ್ಲ. ಹಾಗಾಗಿ ಕನಿಷ್ಠ ಮುಖ್ಯಮಂತ್ರಿಯಾದರೂ ಆಗಲಿ ಎಂದು ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಕೇಶವ್ ಪ್ರಸಾದ್ ಮೌರ್ಯ ಅವರು ಹೇಳಿದ್ದಾರೆ.
ಒಂದು ವೇಳೆ ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದಲ್ಲಿ ಚುನಾವಣೆ ಎದುರಿಸಲು ಬಯಸಿದ್ದೇಯಾದರೆ ಮತ್ತು ಕಾಂಗ್ರೆಸ್ ಗೆದ್ದೆ ಗೆಲ್ಲುತ್ತೆ ಎಂದು ಭಾವಿಸಿದ್ದರೆ ಅವರೇ ಸಿಎಂ ಅಭ್ಯರ್ಥಿಯಾಗುವುದು ಉತ್ತಮ ಎಂದು ಮೌರ್ಯ ಅವರು ಹೇಳಿದ್ದಾರೆ.
ಕಳೆದ 60 ವರ್ಷಗಳಲ್ಲಿ ಅವರ ಕುಟುಂಬ ದೇಶಕ್ಕಾಗಿ ಏನು ಮಾಡಿದೆ ಎಂಬುದು ಎಲ್ಲರಿಗೂ ಗೊತ್ತು. ಈಗ ಪುನಾಃ ಅದೇ ಪರಿಸ್ಥಿತಿಯನ್ನು ಉತ್ತರ ಪ್ರದೇಶದಲ್ಲಿ ನೋಡಲು ನಾನು ಬಯಸುವುದಿಲ್ಲ ಎಂದು ಬಿಜೆಪಿ ನಾಯಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.