ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ನವದೆಹಲಿ: ಸೌದಿ ಅರೇಬಿಯಾದಲ್ಲಿ ಉದ್ಯೋಗ ಕಳೆದುಕೊಂಡಿರುವ 10 ಸಾವಿರ ಭಾರತೀಯ ನೌಕರರನ್ನು ವಾಪಸ್ಸು ಭಾರತಕ್ಕೆ ಕರೆತರಲು ಸರ್ಕಾರ ಎಲ್ಲಾ ರೀತಿಯಲ್ಲಿಯೂ ಪ್ರಯತ್ನ ಮಾಡುತ್ತಿದ್ದು, ಅವರಿಗೆ ಶಿಬಿರಗಳ ಮೂಲಕ ಆಹಾರ ಒದಗಿಸಲಾಗುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸೋಮವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸಲು ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಸೌದಿ ಅರೇಬಿಯಾಕ್ಕೆ ನಾಳೆ ಭೇಟಿ ನೀಡಲಿದ್ದಾರೆ ಎಂದರು.
ಸೌದಿ ಅರೇಬಿಯಾದಲ್ಲಿ ಕೆಲಸ ಕಳೆದುಕೊಂಡ ಪ್ರತಿಯೊಬ್ಬ ಭಾರತೀಯರಿಗೂ ಆಹಾರ ಒದಗಿಸಲಾಗುವುದು. ಗಂಟೆಗೊಮ್ಮೆ ಅಲ್ಲಿನ ಪರಿಸ್ಥಿತಿಯನ್ನು ನಿಗಾ ವಹಿಸುತ್ತಿದ್ದೇನೆ. ಮುಂದಿನ 10 ದಿನಗಳಲ್ಲಿ ಎಲ್ಲಾ 5 ಶಿಬಿರಗಳಿಗೆ ಆಹಾರದ ಪೊಟ್ಟಣ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
''ಆದರೆ ಇದು ಶಾಶ್ವತ ಪರಿಹಾರವಲ್ಲ. ಕಂಪೆನಿಗಳು ಕಾರ್ಖಾನೆಗಳಿಗೆ ಬೀಗ ಹಾಕಿ ಹೋಗಿವೆ. ನಮ್ಮ ದೇಶದ ಕಾರ್ಮಿಕರನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ. ನಾನು ವಿದೇಶಾಂಗ ಕಚೇರಿ ಮತ್ತು ಕಾರ್ಮಿಕ ಕಚೇರಿಯನ್ನು ಸಂಪರ್ಕಿಸಿದ್ದೇವೆ. ಅಲ್ಲಿನ ಭಾರತೀಯರನ್ನು ಕರೆತರಲು ವಿದೇಶಾಂಗ ಕಚೇರಿಯ ನೆರವು ಕೋರಿದ್ದೇವೆ ಎಂದರು.
ಪರಿಸ್ಥಿತಿಯನ್ನು ವಿವರಿಸಿದ ಅವರು, ಕಂಪೆನಿಗಳು ಸರ್ಕಾರಕ್ಕೆ ಕಟ್ಟಬೇಕಾದ ಹಣ ಬಾಕಿಯಿದೆ. ಗುತ್ತಿಗೆಗೆ ಸಹಿ ಹಾಕುವಂತೆ ನಾನು ಕಾರ್ಮಿಕ ಇಲಾಖೆಯನ್ನು ಕೋರಿದ್ದೇನೆ. ಕಂಪೆನಿ ಸರ್ಕಾರಕ್ಕೆ ಕಟ್ಟಬೇಕಾದ ಹಣವನ್ನು ಕಟ್ಟುವ ಮೊದಲು, ಈ ನೌಕರರಿಗೆ ವೇತನ ನೀಡಲಿ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ವಿ.ಕೆ.ಸಿಂಗ್ ಅವರು ರಿಯಾದ್ ತಲುಪಿದ ನಂತರ ಎಲ್ಲಾ ಔಪಚಾರಿಕ ಕ್ರಮ ಮುಗಿಯಲಿದೆ ಎಂದರು.ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ ಸೌದಿಯ ನಿರ್ಮಾಣ ಕೈಗಾರಿಕೆಗಳ ವ್ಯಾಪಾರ, ವಹಿವಾಟಿನಲ್ಲಿ ಕುಂಠಿತವಾಗಿದ್ದು, ಸೌದಿಯ ಪ್ರಮುಖ ನಿರ್ಮಾಣ ಕಂಪೆನಿಯಾದ ಸೌದಿ ಒಗರ್ ನಲ್ಲಿನ ಕೆಲಸಗಾರರನ್ನು ತೆಗೆದುಹಾಕಲಾಗಿದೆ. ಇದರಿಂದ ಸಾವಿರಾರು ಮಂದಿ ಭಾರತೀಯ ನೌಕರರು ಕೂಡ ಕೆಲಸ ಕಳೆದುಕೊಂಡಿದ್ದಾರೆ.