ದೇಶ

ಮಥುರಾದಲ್ಲಿ ಘರ್ಷಣೆ; 2 ಪೊಲೀಸರು ಸೇರಿ 24 ಮಂದಿ ಸಾವು

Srinivasamurthy VN

ಮಥುರಾ: ಉತ್ತರ ಪ್ರದೇಶದಲ್ಲಿ ಮತ್ತೆ ಕಾನೂನು ಸುವ್ಯವಸ್ಥೆಗೆ ಸಾವಾಲೆಸೆಯುವ ಭೀಕರ ಘಟನೆ ಸಂಭವಿಸಿದ್ದು, ಅಕ್ರಮ ಭೂ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಉದ್ರಿಕ್ತ ಜನರ ಗುಂಪು ಪೊಲೀಸರ ಮೇಲೆ ಗುಂಡಿನ ದಾಳಿ ಮಾಡುವ ಮೂಲಕ ಇಬ್ಬರು ಪೊಲೀಸರ ಸಾವಿಗೆ ಕಾರಣರಾಗಿದ್ದಾರೆ.

ಮಥುರಾದ ಜವಾಹರ್ ಬಾಘ್'ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಅಕ್ರಮವಾಗಿ ನಿರ್ಮಿಸಲಾಗಿದ್ದ ಸುಮಾರು 3 ಸಾವಿರ ಮನೆಗಳನ್ನು ಏಕಕಾಲದಲ್ಲಿ ತೆರವುಗೊಳಿಸಲು ಮುಂದಾದಾಗ ಈ ಘಟನೆ ಸಂಭವಿಸಿದ್ದು, ಒತ್ತುವರಿಗೆ ಅನುವು ಮಾಡಿಕೊಡದ ಸ್ಥಳೀಯ ನಿವಾಸಿಗಳು ಪೊಲೀಸರ ವಿರುದ್ಧ ವಾಕ್ಸಮರ ನಡೆಸಿದ್ದಾರೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಪರಿಣಾಮ ಜನರ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಉದ್ರಿಕ್ತರ ಗುಂಪೊಂದು ನೇರ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾರೆ.

ಈ ವೇಳೆ ಕಾರ್ಯಾಚರಣೆ ನಿರತ ಓರ್ವ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದ ಮತ್ತೋರ್ವ ಪೊಲೀಸ್ ಕಾನ್ಸ್ ಟೇಬಲ್ ಕೂಡ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಫಲಕಾರಿಯಾಗದೇ ಕಳೆದ ರಾತ್ರಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಭೀಕರ ಹಿಂಸಾಚಾರದಲ್ಲಿ ಇತರೆ 10 ಪೊಲೀಸರು ಸೇರಿದಂತೆ ಪ್ರತಿಭಟನಾ ನಿರತರೂ ಕೂಡ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.  

ಆರಂಭದಲ್ಲಿ ಜನರ ಪ್ರತಿಭಟನೆ ಶಾಂತಿಯುತವಾಗಿಯೇ ಸಾಗಿತ್ತಾದರೂ, ಶಾಂತಿಯುತ ಪ್ರತಿಭಟನೆ ವೇಳೆ ಕೆಲ ಅಪರಿಚಿತ ವ್ಯಕ್ತಿಗಳು ಪೊಲೀಸರತ್ತ ಗುಂಡು ಹಾರಿಸಿದ್ದಾರೆ. ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಬಲಪ್ರಯೋಗ ಮಾಡಿದ ಬಳಿಕ ಘರ್ಷಣೆ ತೀವ್ರಗೊಂಡಿದ್ದು, ಈ ವೇಳೆ ಎಸ್'ಎಚ್'ಓ ಸಂತೋಷ್ ಯಾದವ್ ಅವರು ಹತ್ಯೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಥುರಾ ಎಸ್ ಪಿ ಮುಕುಲ್ ದ್ವಿವೇದಿ ಚಿಕಿತ್ಸೆ ಫಲಿಸದೇ ಅಸು ನೀಗಿದ್ದಾರೆ.

ಏನಿದು ಘಟನೆ?

ಸ್ವಾಧೀನ್ ಭಾರತ್ ಆಂದೋಲನ್ ಎಂಬ ಸಂಸ್ಥೆಯ ಕಾರ್ಯಕರ್ತರು ಧರಣಿಯ ನೆಪದಲ್ಲಿ ಎರಡು ವರ್ಷಗಳಿಂದ ಜವಾಹರ್ ಬಾಘ್ ಪ್ರದೇಶವನ್ನು ವಶದಲ್ಲಿಟ್ಟುಕೊಂಡಿದ್ದಾರೆಂಬ ಆರೋಪ ಕೇಳಿಬಂದಿತ್ತು. ಈ ಪ್ರತಿಭಟನಾಕಾರರನ್ನು ಜಾಗ ಖಾಲಿ ಮಾಡಿಸುವಂತೆ ಜಿಲ್ಲಾಡಳಿತ ಪೊಲೀಸರಿಗೆ ಆದೇಶ ನೀಡಿತ್ತು. ಹೀಗಾಗಿ ನಿನ್ನೆ ಪೊಲೀಸರು ತೆರವಿಗೆ ಮುಂದಾದಗ ಉದ್ರಿಕ್ತ ಗುಂಪು ಪೊಲೀಸರ ಮೇಲೆಯೇ ಗುಂಡು ಹಾರಿಸಿ ಪೊಲೀಸರನ್ನು ಕೊಂದು ಹಾಕಿದ್ದಾರೆ.

ತನಿಖೆ ಆದೇಶಿಸಿದ ಸಿಎಂ ಅಖಿಲೇಶ್ ಯಾದವ್
ಇನ್ನು ಅತ್ತ ಮಥುರಾ ಘಟನೇ ದೇಶವ್ಯಾಪಿ ಸುದ್ದಿಗೆ ಗ್ರಾಸವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್ ಅವರು ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೆ ಮೃತ ಪೊಲೀಸ್ ಅಧಿಕಾರಿಯ ಕುಟುಂಬಕ್ಕೆ 20 ಲಕ್ಷ ರುಪಾಯಿ ಪರಿಹಾರವನ್ನು ಕೂಡ ಘೋಷಿಸಿದ್ದಾರೆ.

SCROLL FOR NEXT