ನವದೆಹಲಿ: ಇಸೀಸ್ ಪರ ಕಾರ್ಯಾಚರಣೆ ನಡೆಸುತ್ತಿದ್ದ ಮೊಹಮ್ಮದ್ ನಸೀರ್ ವಿರುದ್ಧ ಎನ್ಐಎ ಚಾರ್ಜ್ ಶೀಟ್ ದಾಖಲಿಸಿದ್ದು ಈತನ ಕುರಿತು ಮತ್ತಷ್ಟು ಮಾಹಿತಿ ದೊರೆತಿದ್ದು, ಇಸೀಸ್ ಧ್ವಜ ವಿನ್ಯಾಸ ಮಾಡಿದ ಮೊಹಮ್ಮದ್ ನಸೀರ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದು ಚೆನ್ನೈ ನಲ್ಲಿ ಎಂಬ ಮಾಹಿತಿ ಬಹಿರಂಗವಾಗಿದೆ.
ಮೊಹಮ್ಮದ್ ನಸೀರ್ ನ ತಂದೆ ಅಮೀರ್ ಮೊಹಮ್ಮದ್ ಅವರ ಹೇಳಿಕೆಯ ಆಧಾರದಲ್ಲಿ ಎನ್ಐಎ ಚಾರ್ಜ್ ಶೀಟ್ ದಾಖಲಿಸಿದ್ದು, ಅಮೀರ್ ಮೊಹಮ್ಮದ್ ಅವರನ್ನು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಿದೆ. ಎನ್ಐಎ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ನ್ನು ಸಲ್ಲಿಸಲಾಗಿದ್ದು ಸುಡಾನ್ ಮೂಲಕ ಸಿರಿಯಾಗೆ ತೆರಳುವಾಗ ತನ್ನ ತಂದೆಗೆ ಇ-ಮೇಲ್ ಕಳಿಸಿದ್ದ ಎಂದು ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ. ಮೊಹಮ್ಮದ್ ನಸೀರ್ ಹಾಗೂ ಆತನ ತಂದೆ ನಡುವೆ ನಡೆದಿದ್ದ ವಾಟ್ಸ್ ಆಪ್ ಹಾಗೂ ಇ-ಮೇಲ್ ಸಂಪರ್ಕ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಲು ಸಹಕಾರಿಯಾಗಿದ್ದು, ಮೊಹಮ್ಮದ್ ನಸೀರ್ ತಾನು ಇಸೀಸ್ ಉಗ್ರ ಸಂಘಟನೆ ಸೇರಿರುವುದಾಗಿ ತಿಳಿಸಿದ್ದ ಎಂದು ಚಾರ್ಜ್ ಶೀಟ್ ಮೂಲಕ ತಿಳಿದುಬಂದಿದೆ. ಚೆನ್ನೈ ನ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮುಗಿಸಿದ ಬಳಿಕ 2014 ರಲ್ಲಿ ಕೆಲಸ ಅರಸಿ ದುಬೈ ಗೆ ತೆರಳಿದ್ದ ನಸೀರ್, ದುಬೈ ನ ಕಂಪನಿಯೊಂದರಲ್ಲಿ ವೆಬ್ ಡೆವಲಪರ್ ಹಾಗೂ ಗ್ರಾಫ್ರಿಕ್ ವಿನ್ಯಾಸಗಾರನಾಗಿ ಕಾರ್ಯನಿರ್ವಹಿಸಿದ್ದ, ದುಬೈ ನಲ್ಲಿರಬೇಕಾದರೆ ಇಸೀಸ್ ಪರ ವಿಡಿಯೋಗಳನ್ನು ನೋಡಿ ಉಗ್ರ ಸಂಘಟನೆಯತ್ತ ಆಕರ್ಷಿತನಾಗಿ ಸುಡಾನ್ ಮೂಲಕ ಸಿರಿಯಾಗೆ ತೆರಳಿದ್ದ.