ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ನಾಯಕಿ ಜಯಲಲಿತಾ ಎನ್ ಡಿಎ ಮೈತ್ರಿಕೂಟಕ್ಕೆ ಬೆಂಬಲ ನಿಡುವ ಸಾಧ್ಯತೆಗಳಿದ್ದು, ಬೆಂಬಲ ಖಚಿತವಾದರೆ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಮತ್ತಷ್ಟು ಬಲಿಷ್ಠವಾಗಲಿದೆ.
ಲೋಕಸಭೆಯಲ್ಲಿ 39 ಸಂಸದರು ಹಾಗೂ ರಾಜ್ಯಸಭೆಯಲ್ಲಿ 12 ಸಂಸದರನ್ನು ಹೊಂದಿರುವ ಎಐಎಡಿಎಂಕೆ ಪಕ್ಷದ ಬೆಂಬಲ ಗಳಿಸುವುದರಿಂದ ಕೇಂದ್ರ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಹೆಚ್ಚಿನ ಸಂಖ್ಯೆ ಸಿಗಲಿದ್ದು ಮಸೂದೆಗಳನ್ನು ಅಂಗೀಕರಿಸುವುದು ಸುಲಭವಾಗಲಿದೆ. ಮೈತ್ರಿ ವಿಚಾರದ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ ಪೂರಕವಾಗಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ತಿಂಗಳಾಂತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದು ಇದರ ಬಳಿಕ ಮೈತ್ರಿ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.
ತಮಿಳುನಾಡಿನಲ್ಲಿ ಸತತ ಎರಡನೇ ಬಾರಿಗೆ ಸಿಎಂ ಆಗಿ ಆಯ್ಕೆಯಾಗಿರುವ ಜಯಲಲಿತಾ ರಾಜ್ಯದ ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸಬೇಕಿದ್ದು, ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗೆಳ ಪ್ರಕಾರ ಯೋಜನೆಗಳ ಜಾರಿಗೆ ಕೇಂದ್ರದ ನೆರವು ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎಐಎಡಿಎಂಕೆ ಎನ್ ಡಿಎ ಮೈತ್ರಿಕೂಟಕ್ಕೆ ಬಾಹ್ಯ ಬೆಂಬಲ ನೀಡುವುದು ಬಹುತೇಕ ಖಚಿತ ಎಂದು ವಿಶ್ಲೇಷಿಸಲಾಗುತ್ತಿದೆ.