ದೇಶ

ಲಡ್ಡು ಮಾರಾಟದಲ್ಲೂ ದಾಖಲೆ ನಿರ್ಮಿಸಿದ ತಿರುಮಲ ದೇಗುಲ!

Srinivasamurthy VN

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ಎಂಬ ಖ್ಯಾತಿ ಪಡೆದಿರುವ ತಿರುಪತಿ ತಿರುಮಲ ದೇಗುಲ ಮತ್ತೊಂದು ದಾಖಲೆ ನಿರ್ಮಿಸಿದ್ದು, ಕೇವಲ ಒಂದು ತಿಂಗಳಲ್ಲಿ ಬರೊಬ್ಬರಿ 1 ಕೋಟಿ ಲಡ್ಡು ಮಾರಾಟ ಮಾಡುವ ಮೂಲಕ ಹೊಸದಂದು ದಾಖಲೆ ನಿರ್ಮಿಸಿದೆ.

ಒಂದಿಲ್ಲೊಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುವ ತಿರುಪತಿ ತಿರುಮಲ ದೇವಾಲಯ ಇದೀಗ ಲಡ್ಡು ಮಾರಾಟದಲ್ಲಿ ದಾಖಲೆ ನಿರ್ಮಿಸುವ ಮೂಲಕ ಮತ್ತೆ ಸುದ್ದಿಯಲ್ಲಿದೆ. ಕೇವಲ ಒಂದು ತಿಂಗಳ ಅವಧಿಯಲ್ಲಿ ದೇವಾಲಯದಿಂದ ಬರೊಬ್ಬರಿ 1 ಕೋಟಿ ಲಡ್ಡುಗಳು ಮಾರಾಟವಾಗಿವೆಯಂತೆ. ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ನೀಡಿರುವ ಮಾಹಿತಿ ಪ್ರಕಾರ ಕಳೆದ ಮೇ ತಿಂಗಳಲ್ಲಿ ತಿರುಮಲದಲ್ಲಿ ಬರೊಬ್ಬರಿ 1 ಕೋಟಿ ಲಡ್ಡುಗಳು ಮಾರಾಟವಾಗಿದೆ.

ಕೇವಲ ಲಡ್ಡು ಮಾರಾಟವಷ್ಟೇ ಅಲ್ಲದೇ ಮೇ ತಿಂಗಳಲ್ಲಿ ದೇವಾಲಯಕ್ಕೆ ಆಗಮಿಸಿರುವ ಭಕ್ತರ ಸಂಖ್ಯೆಯಲ್ಲೂ ದಾಖಲೆ ಪ್ರಮಾಣದ ಏರಿಕೆಯಾಗಿದೆ. ದೇವಾಲಯದ ಆಡಳಿತ ಮಂಡಳಿಯ ಅಂಕಿ ಅಂಶಗಳ ಪ್ರಕಾರ ಕಳೆದ ಮೇ ತಿಂಗಳಲ್ಲಿ 25ಲಕ್ಷದ 89 ಸಾವಿರ ಭಕ್ತರು ಶ್ರೀನಿವಾಸನ ದರ್ಶನ ಪಡೆದಿದ್ದು, ಇದು ಈ ವರೆಗಿನ ಮೇ ತಿಂಗಳ ಗರಿಷ್ಠ ಭಕ್ತರ ಆಗಮನವಂತೆ. ಇನ್ನು ಮೇ 28ರ ಒಂದೇ ದಿನದಲ್ಲಿ 4.5ಲಕ್ಷ ಲಡ್ಡುಗಳು ಹಂಚಿಕೆಯಾಗಿವೆ. ಇದೂ ಕೂಡ ಒಂದು ದಾಖಲೆಯಾಗಿದ್ದು, ಒಂದೇ ದಿನದಲ್ಲಿ ಇಷ್ಟು ಪ್ರಮಾಣದಲ್ಲಿ ಲಡ್ಡು ಮಾರಾಟವಾಗಿರುವುದು ಇದೇ ಮೊದಲು.

ಸಾಮಾನ್ಯವಾಗಿ ಮೇ ತಿಂಗಳಲ್ಲಿ ಬೇಸಿಗೆ ಇರುವುದರಿಂದ ದೇವಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಕಡಿಮೆ ಇರುತ್ತಿತ್ತಂತೆ. ಆದರೆ ಈ ಭಾರಿ ಭೀಕರ ಬರಗಾಲದ ನಡುವೆಯೂ ದೇವಾಲಯಕ್ಕೆ ದಾಖಲೆ ಪ್ರಮಾಣದಲ್ಲಿ ಭಕ್ತರ ಆಗಮನವಾಗಿದೆ. ಇದೇ ಕಾರಣಕ್ಕೆ ಲಡ್ಡು ಮಾರಾಟದಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಟಿಟಿಡಿ ತಿಳಿಸಿದೆ.

ಟಿಟಿಡಿ ದಾಖಲೆಗಳ ಪ್ರಕಾರ ಈ ಹಿಂದೆ 2015ರಲ್ಲಿ ಮೇ ತಿಂಗಳಲ್ಲಿ 89.84 ಲಕ್ಷ ಲಡ್ಡುಗಳು ಮಾರಾಟವಾಗಿದ್ದವು. ಇದು ಈ ವರೆಗಿನ ಗರಿಷ್ಠ ಸಾಧನೆಯಾಗಿತ್ತು. ಆದರೆ ಪ್ರಸಕ್ತ ವರ್ಷದ ಮೇ ತಿಂಗಳಲ್ಲಿ 1 ಕೋಟಿ ಲಡ್ಡುಗಳು ಮಾರಾಟವಾಗಿದ್ದು, ಇದೇ ಗರಿಷ್ಠ ಮಾರಾಟವಾಗಿದೆ. ಇನ್ನು 2013ರ ಮೇ ತಿಂಗಳಲ್ಲಿ 72.33ಲಕ್ಷ ಲಡ್ಡುಗಳು ಮಾರಾಟವಾಗಿದ್ದರೆ, 2014ರ ಮೇ ತಿಂಗಳಲ್ಲಿ 80.64 ಲಕ್ಷ  ಲಡ್ಡುಗಳು ಮಾರಾಟವಾಗಿದ್ದವು. 2015ರ ಮೇ ತಿಂಗಳಲ್ಲಿ 89.84 ಲಡ್ಡುಗಳು ಮಾರಾಟವಾಗಿವೆ.

ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಟಿಟಿಡಿ ಪ್ರಸಾದದ ರೂಪದಲ್ಲಿ 2 ಲಡ್ಡು ನೀಡಲಿದ್ದು, ಒಂದು ಲಾಡು ದರ 20 ರು. ಎಂದು ದರ ನಿಗದಿ ಪಡಿಸಿದೆ. ಎರಡಕ್ಕಿಂತ ಹೆಚ್ಚು ಲಾಡು ಪಡೆಯುವ ಭಕ್ತರು ಪ್ರತೀ ಲಡ್ಡಿಗೆ 50 ರು. ನೀಡಿ ಖರೀದಿಸಬೇಕು. ಅಂತೆಯೇ ಲಾಡು ಮಾರಾಟದ ಮೇಲೂ ಟಿಟಿಡಿ ನಿರ್ಬಂಧ ಹೇರಿದ್ದು, ಓರ್ವ ವ್ಯಕ್ತಿಗೆ 4ಕ್ಕಿಂತ ಹೆಚ್ಚು ಲಾಡುಗಳನ್ನು ನೀಡುವಂತಿಲ್ಲ ಎಂದು ಕಾನೂನು ವಿಧಿಸಿದೆ. ಹೀಗಿದ್ದೂ ಲಡ್ಡು ಮಾರಾಟದಲ್ಲಿ ದಾಖಲೆ ಪ್ರಮಾಣದ ಏರಿಕೆಯಾಗಿರುವುದು ದಿನೇ ದಿನೇ ತಿಮ್ಮಪ್ಪನ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದರ ಸಂಕೇತ ಎಂದು ಹೇಳಲಾಗುತ್ತಿದೆ.

SCROLL FOR NEXT