ಭ್ರಷ್ಟ ಬಿಜೆಪಿ ಕೈರಾನಾ ಘಟನೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದೆ: ಅಖಿಲೇಶ್ ಯಾದವ್
ಕೈರಾನಾ ಘಟನೆಗೆ ಸಂಬಂಧಿಸಿದಂತೆ ಭ್ರಷ್ಟ ಬಿಜೆಪಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್...
ಮಥುರಾ: ಕೈರಾನಾ ಘಟನೆಗೆ ಸಂಬಂಧಿಸಿದಂತೆ ಭ್ರಷ್ಟ ಬಿಜೆಪಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಸೋಮವಾರ ಆರೋಪಿಸಿದ್ದಾರೆ.
ಅತಿ ಹೆಚ್ಚು ಮುಸ್ಲಿಂರಿರುವ ಶಾಮ್ಲಿ ಜಿಲ್ಲೆಯ ಕೈರಾನಾ ಗ್ರಾಮದಿಂದ ಹಿಂದೂಗಳು ವಲಸೆ ಹೋಗುವಂತೆ ಒತ್ತಡ ಹೇರುತ್ತಿರುವ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಉತ್ತರ ಪ್ರದೇಶ ಸಿಎಂ, ಹಿಂದೂಗಳನ್ನು ಸಾಮೂಹಿಕವಾಗಿ ವಲಸೆ ಹೋಗುವಂತೆ ಮಾಡಲಾಗುತ್ತಿದೆ ಎಂದು ಸುಳ್ಳು ಹೇಳುವ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಕೀಳು ರಾಜಕೀಯ ಮಾಡುವ ಬದಲು ರಚನಾತ್ಮಕ ಕೆಲಸಗಳನ್ನು ಮಾಡಿ ಎಂದು ಬಿಜೆಪಿಗೆ ಸಲಹೆ ನೀಡಿದರು.
ಸಮಾಜವಾದಿ ಪಕ್ಷದ ಕಾರ್ಯಕರ್ತರು ಕೈರಾನಾ ಗ್ರಾಮವನ್ನು ಬಲವಂತದಿಂದ ತ್ಯಜಿಸುವಂತೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದರೆ ಬಿಜೆಪಿ ಒದಗಿಸಿರುವ ಪಟ್ಟಿಯನ್ನು ನಾವು ಪರಿಶೀಲಿಸಿದ್ದು, ಆ ಪಟ್ಟಿಯಲ್ಲಿದ್ದವರು ಹಲವು ವರ್ಷಗಳ ಹಿಂದೆ, ನಮ್ಮ ಪಕ್ಷ ಅಧಿಕಾರಕ್ಕೆ ಬರುವ ಮುನ್ನವೇ ವಲಸೆ ಹೋಗಿದ್ದಾರೆ ಎಂದು ಅಖಿಲೇಶ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಚುನಾವಣೆ ಸಮೀಪ ಬರುತ್ತಿದ್ದಂತೆ ನಮ್ಮ ವಿರುದ್ಧ ಅವರಿಗೆ ಯಾವುದೇ ವಿಷಯಗಳು ಸಿಗುತ್ತಿಲ್ಲ. ಹೀಗಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಉತ್ತರ ಪ್ರದೇಶ ಸಿಎಂ ವಾಗ್ದಾಳಿ ನಡೆಸಿದರು.