ದೇಶ

ಬಾಲ್ಕನಿಯಿಂದ ಬಿದ್ದು ವಿದ್ಯುತ್ ಕಂಬದಲ್ಲಿ ಸಿಲುಕಿದ್ದ ಶ್ವಾನ: ಪ್ರಾಣದ ಹಂಗು ತೊರೆದು ರಕ್ಷಿಸಿದ ಯುವಕ, Video ವೈರಲ್..!

ಬಾಲ್ಕನಿಯಿಂದ ಬಿದ್ದು ವಿದ್ಯುತ್ ಕಂಬದಲ್ಲಿ ಸಿಲುಕಿದ್ದ ಶ್ವಾನ: ಪ್ರಾಣದ ಹಂಗು ತೊರೆದು ರಕ್ಷಿಸಿದ ಯುವಕ, Video ವೈರಲ್..!
ಶ್ವಾನವನ್ನು ರಕ್ಷಿಸುತ್ತಿರುವ ವ್ಯಕ್ತಿ
Published On :

ವಸತಿ ಕಟ್ಟಡವೊಂದರ ಬಾಲ್ಕನಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಎತ್ತರದ ವಿದ್ಯುತ್ ಕಂಬದ ಮೇಲೆ ಸಿಲುಕಿಕೊಂಡಿದ್ದ ಸಾಕುನಾಯಿಯೊಂದನ್ನು ಯುವಕನೊಬ್ಬ ಪ್ರಾಣದ ಹಂಗು ತೊರೆದು ರಕ್ಷಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಕಟ್ಟಡದ ಮೇಲಿನ ಮಹಡಿಯ ಬಾಲ್ಕನಿಯಿಂದ ಆಯತಪ್ಪಿ ಬಿದ್ದ ನಾಯಿ, ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬದ ಮೇಲ್ಭಾಗದಲ್ಲಿ ಸಿಲುಕಿಕೊಂಡಿತ್ತು. ಎತ್ತರದಿಂದ ಕೆಳಗಿಳಿಯಲು ಸಾಧ್ಯವಾಗದೆ ಭಯದಿಂದ ಪರದಾಡುತ್ತಿತ್ತು. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಕಂಬವನ್ನೇರಿ ನಾಯಿಯನ್ನು ಸುರಕ್ಷಿತವಾಗಿ ಕೆಳಗೆ ಕರೆತಂದಿದ್ದಾರೆ.

ಈ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಕ್ತಿಯ ಧೈರ್ಯ ಮತ್ತು ಮಾನವೀಯತೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನವೆಂಬರ್ 27ರಂದು 'ಘರ್ ಕೆ ಕಲೇಶ್' ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಸತಿ ಕಟ್ಟಡದ ಪಕ್ಕದಲ್ಲಿರುವ ವಿದ್ಯುತ್ ಕಂಬದ ಮೇಲೆ ನಾಯಿ ಸಿಲುಕಿಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕೆಳಗೆ ಕೆಲವರು ಜಮಾಯಿಸಿ ನಾಯಿಯ ಪರಿಸ್ಥಿತಿಯನ್ನು ಆತಂಕದಿಂದ ಗಮನಿಸುತ್ತಿರುವ ದೃಶ್ಯವೂ ಸೆರೆಯಾಗಿದೆ.

ಸಾಮಾಜಿಕ ಜಾಲತಾಣದ ಪೋಸ್ಟ್ ಪ್ರಕಾರ, ನಾಯಿ ಮನೆಯ ಮೇಲಿನ ಮಹಡಿಯ ಬಾಲ್ಕನಿಯಿಂದ ಆಕಸ್ಮಿಕವಾಗಿ ಬಿದ್ದು ವಿದ್ಯುತ್ ಕಂಬದ ಮೇಲೆ ಸಿಲುಕಿಕೊಂಡಿದೆ. ಕೆಳಗೆ ಇಳಿಯಲು ಸಾಧ್ಯವಾಗದೆ ಅಪಾಯಕಾರಿ ಸ್ಥಿತಿಯಲ್ಲಿ ಸಿಲುಕಿದ್ದ ನಾಯಿಯನ್ನು, ಮದುವೆ ಸಮಾರಂಭಗಳಿಗೆ ಸಂಬಂಧಿಸಿದ ಸಾಂಪ್ರದಾಯಿಕ ರಾತ್ರಿ ಮೆರವಣಿಗೆಯಾದ 'ಜಾಗೋ' ಕಾರ್ಯಕ್ರಮಕ್ಕೆ ತೆರಳುತ್ತಿದ್ದವರ ಗುಂಪೊಂದು ಗಮನಿಸಿದೆ.

ನಾಯಿ ಸಂಕಷ್ಟದಲ್ಲಿರುವುದನ್ನು ಕಂಡ ವ್ಯಕ್ತಿಯೊಬ್ಬರು ತಕ್ಷಣವೇ ರಕ್ಷಣೆಗೆ ಮುಂದಾಗಿದ್ದಾರೆ. ವಿದ್ಯುತ್ ಕಂಬವನ್ನು ಎಚ್ಚರಿಕೆಯಿಂದ ಏರಿದ ಅವರು ನಾಯಿಯ ಬಳಿ ತಲುಪಿದ್ದಾರೆ. ಈ ವೇಳೆ ಕೆಳಗಿದ್ದ ಕೆಲವರು ಅವರಿಗೆ ಪ್ರೋತ್ಸಾಹ ನೀಡುತ್ತಿದ್ದರೆ, ಮತ್ತೆ ಕೆಲವರು ತಮ್ಮ ಮೊಬೈಲ್‌ನಲ್ಲಿ ಘಟನೆಯನ್ನು ಚಿತ್ರೀಕರಿಸಿದ್ದಾರೆ.

ನಾಯಿಯ ಬಳಿ ತಲುಪಿದ ವ್ಯಕ್ತಿ ಅದನ್ನು ಎಚ್ಚರಿಕೆಯಿಂದ ಎತ್ತಿಕೊಂಡು ಕೆಳಗಿಳಿಯಲು ಆರಂಭಿಸಿದ್ದಾರೆ. ಶ್ವಾನವನ್ನು ಎದೆಗೆ ಅಪ್ಪಿಕೊಂಡು ನಿಧಾನವಾಗಿ ಕೆಳಗೆ ಬಂದಿದ್ದಾರೆ. ಬಳಿಕ ಆತಂಕದಿಂದ ಕಾಯುತ್ತಿದ್ದ ಅದರ ಮಾಲೀಕರಿಗೆ ನಾಯಿಯನ್ನು ಒಪ್ಪಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ಗಳಿಸಿದೆ. ಸಂಕಷ್ಟದಲ್ಲಿದ್ದ ಮೂಕ ಪ್ರಾಣಿಯ ನೆರವಿಗೆ ಧಾವಿಸಿದ ವ್ಯಕ್ತಿಯ ಧೈರ್ಯ ಮತ್ತು ಕರುಣೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ಮಾನವೀಯತೆ ಅಪರೂಪವಾಗಿರಬಹುದು, ಆದರೆ ,ಇನ್ನೂ ಸಂಪೂರ್ಣವಾಗಿ ಸತ್ತಿಲ್ಲ' ಎಂಬ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಬ್ಬರು ಇದೊಂದು ನಿಸ್ವಾರ್ಥ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ವ್ಯಕ್ತಿಯ ಒಳಿತಿಗಾಗಿ ಹಾರೈಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.