ದೇಶ

ಗುಲ್ಬರ್ಗ್ ಹತ್ಯಾಕಾಂಡ: ಅಪರಾಧಿಗಳಿಗೆ ಇಂದು ಶಿಕ್ಷೆ ಪ್ರಮಾಣ ಪ್ರಕಟ

Srinivasamurthy VN

ಅಹ್ಮದಾಬಾದ್: 2002ರ ಗುಜರಾತ್ ಹಿಂಸಾಚಾರ ವೇಳೆ 69 ಮಂದಿಯ ಧಾರುಣ ಸಾವಿಗೆ ಕಾರಣವಾಗಿದ್ದ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದ ಅಪರಾಧಿಗಳಿಗೆ ಅಹ್ಮದಾಬಾದ್ ವಿಶೇಷ  ನ್ಯಾಯಾಲಯ ಶುಕ್ರವಾರ ಶಿಕ್ಷೆ ಪ್ರಮಾಣ ಪ್ರಕಟ ಮಾಡುತ್ತಿದ್ದು, ನ್ಯಾಯಾಲಯ ಆವರಣದ ಸುತ್ತ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಕಳೆದ ಜೂನ್ 2ರಂದು ಗೋದ್ರೋತ್ತರ ಘರ್ಷಣೆ ವೇಳೆ ನಡೆದಿದ್ದ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣ ಸಂಬಂಧ ಅಹ್ಮದಾಬಾದ್ ವಿಶೇಷ ನ್ಯಾಯಾಲಯ 24 ಮಂದಿ ತಪ್ಪಿತಸ್ಥರು ಎಂದು  ತೀರ್ಪು ನೀಡಿತ್ತಾದರೂ, ಪ್ರಾಸಿಕ್ಯೂಷನ್ ಮತ್ತು ಡಿಫೆನ್ಸ್ ವಕೀಲರ ವಾದ-ಪ್ರತಿವಾದಗಳಿಂದಾಗಿ ಸತತ ಮೂರು ಬಾರಿ ನ್ಯಾಯಾಲಯ ಅಪರಾಧಿಗಳ ಶಿಕ್ಷೆ ಪ್ರಮಾಣ ಘೋಷಣೆಯನ್ನು  ಮುಂದೂಡಿತ್ತು. ಕಳೆದ ಜೂನ್ 13ರಂದು ನಡೆದ ವಿಚಾರಣೆಯಲ್ಲಿ ನ್ಯಾಯಾಲಯ ಜೂನ್ 17ರಂದು ಶಿಕ್ಷೆ ಪ್ರಮಾಣ ಘೋಷಣೆ ಮಾಡುವುದಾಗಿ ತಿಳಿಸಿತ್ತು.

ಅದರಂತೆ ಇಂದು ಅಹ್ಮದಾಬಾದ್ ವಿಶೇಷ ನ್ಯಾಯಾಲಯ ತನ್ನ ತೀರ್ಪು ನೀಡಲಿದ್ದು, ಇಡೀ ದೇಶದ ಚಿತ್ತ ಇದೀಗ ಅಹ್ಮದಾಬಾದ್ ವಿಶೇಷ ನ್ಯಾಯಾಲಯದತ್ತ ನೆಟ್ಟಿದೆ. ಈ ಹಿನ್ನಲೆಯಲ್ಲಿ  ಅಹ್ಮದಾಬಾದ್ ವಿಶೇಷ ನ್ಯಾಯಾಲಯದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ನ್ಯಾಯಾಲಯದ ಕಲಾಪ ಆರಂಭವಾಗಲಿದೆ.

ಇಡೀ ದೇಶದ ಗಮನ ಸೆಳೆದಿದ್ದ ಗುಲ್ಬರ್ಗ್ ಹತ್ಯಾಕಾಂಡ ತೀರ್ಪನ್ನು ಅಹ್ಮದಾಬಾದ್ ವಿಶೇಷ ನ್ಯಾಯಾಲಯ ಕಳೆದ ಜೂನ್ 2ರಂದು ಘೋಷಣೆ ಮಾಡಿತ್ತು. ಅದರಂತೆ ಪ್ರಕರಣದಲ್ಲಿ   ಬಂಧಿತರಾಗಿದ್ದ 66 ಮಂದಿಯ ಪೈಕಿ 24 ಮಂದಿಯ ಆರೋಪ ಸಾಬೀತಾಗಿದೆ ಎಂದು ಅಹ್ಮದಾಬಾದ್ ವಿಶೇಷ ನ್ಯಾಯಾಲಯದ ಹೇಳಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ.ಪಿಬಿ ದೇಸಾಯಿ  ಅವರು ತಮ್ಮ ಸುಧೀರ್ಘ ತೀರ್ಪು ಪ್ರಕಟಿಸಿದ್ದು, 66 ಮಂದಿ ಆರೋಪಿಗಳ ಪೈಕಿ 24 ಮಂದಿಯ ಆರೋಪ ಸಾಬೀತಾಗಿದೆ. ಈ ಪೈಕಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 36 ಜನರನ್ನು ಖುಲಾಸೆ  ಮಾಡಲಾಗಿದ್ದು, 11 ಆರೋಪಿಗಳ ವಿರುದ್ಧದ ಕೊಲೆ ಆರೋಪ ಸಾಬೀತಾಗಿದೆ. ಉಳಿದ 13 ಆರೋಪಿಗಳ  ವಿರುದ್ಧ ಇತರೆ ಆರೋಪಗಳು ಸಾಬೀತಾಗಿದೆ ಎಂದು ತೀರ್ಪು ನೀಡಿದ್ದರು.

SCROLL FOR NEXT