ನವದೆಹಲಿ: ಭಯೋತ್ಪಾದನೆ ನಡೆಯುತ್ತಿರಬೇಕಾದರೆ ದ್ವಿಪಕ್ಷೀಯ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಭಾರತ- ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ ಬಗ್ಗೆ ಭಾರತ ತನ್ನ ನಿಲುವನ್ನು ಪುನರುಚ್ಚರಿಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್, ಪ್ರಧಾನಿ ನರೇಂದ್ರ ಮೋದಿ- ಪಾಕ್ ಪ್ರಧಾನಿ ನವಾಜ್ ಷರೀಫ್ ಹಿಂದೆಂದೂ ಉಭಯ ದೇಶದ ನಾಯಕರ ನಡುವೆ ಇರದಂತಹ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ. ಆದರೆ ಭಾರತ ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಎಂದಿಗೂ ರಾಜಿಮಾಡಿಕೊಳ್ಳುವುದಿಲ್ಲ, ಭಯೋತ್ಪಾದನೆ ಜೊತೆ ಜೊತೆಗೇ ದ್ವಿಪಕ್ಷೀಯ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿದೇಶಾಂಗ ವ್ಯವಹಾರಗಳಲ್ಲಿ ದಕ್ಷಿಣ ಏಷ್ಯಾಗೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ ಎಂಬ ಆರೋಪಗಳನ್ನು ನಿರಾಕರಿಸಿರುವ ಸುಷ್ಮಾ, ನೆರೆ ರಾಷ್ಟ್ರಗಳಿಗೆ ನೆರವು ನೀಡಬಲ್ಲ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ ಎಂದು ಹೇಳಿದ್ದಾರೆ.