ಲಖನೌ: ಪಕ್ಷದ ತೊರೆದ ಬಿಎಸ್ಪಿ ಹಿರಿಯ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು, ಪಕ್ಷ ಬಿಟ್ಟು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದಿದ್ದಾರೆ. ಅಲ್ಲದೆ ತಮ್ಮ ವಿರುದ್ಧದ ಟಿಕೆಟ್ ಹರಾಜು ಆರೋಪವನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಪ್ರತಿಪಕ್ಷದ ನಾಯಕ ಮೌರ್ಯ ಅವರು ಬಿಎಸ್ಪಿಗೆ ರಾಜಿನಾಮೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಯಾವತಿ, ನಾನು ಅವರ ಮಗ ಮತ್ತು ಮಗಳಿಗೆ ಟಿಕೆಟ್ ನೀಡಲು ನಿರಾಕರಿಸಿದ್ದರಿಂದ ಅಸಮಾಧಾನಗೊಂಡು ಪಕ್ಷ ತೊರೆದಿದ್ದಾರೆ ಎಂದು ಆರೋಪಿಸಿದರು.
ಕೆಲವು ದಿನಗಳ ಹಿಂದಷ್ಟೇ ನಾನು ಮೌರ್ಯ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದೆ. ಆದರೆ ಈಗ ಅವರೇ ಪಕ್ಷ ತೊರೆದಿರುವುದು ಮತ್ತಷ್ಟು ಒಳ್ಳೆಯ ವಿಚಾರ ಎಂದು ವ್ಯಂಗ್ಯವಾಡಿದ್ದಾರೆ.
ತಮ್ಮ ವಿರುದ್ಧ ಟಿಕೆಟ್ ಹರಾಜು ಆರೋಪ ಮಾಡಿರುವ ಮೌರ್ಯ ಅವರು ಕಳೆದ ವಿಧಾನಸಭೆ ಚುನಾವಣೆ ವೇಳೆ ಟಿಕೆಟ್ ಪಡೆಯಲು ನನಗೆ ಎಷ್ಟು ಹಣ ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಬಿಎಸ್ಪಿ ನಾಯಕಿ ಆಗ್ರಹಿಸಿದ್ದಾರೆ.