ಕೊಚ್ಚಿ: ಕೇರಳದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಸೋಲಾರ್ ಹಗರಣದ ಪ್ರಮುಖ ಆರೋಪಿ ಸರಿತಾ ಎಸ್ ನಾಯರ್ ವಿರುದ್ಧ ನ್ಯಾಯಾಂಗ ಆಯೋಗ ಗುರುವಾರ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದೆ.
ಸಮನ್ಸ್ ನೀಡಿದರೂ ವಿಚಾರಣೆಗೆ ಹಾಜರಾಗದ ಸರಿತಾ ವಿರುದ್ಧ ಹಗರಣದ ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಜಿ. ಶಿವರಾಜನ್ ಅವರು ಇಂದು ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದ್ದಾರೆ. ಅಲ್ಲದೆ ಆರೋಪಿಯನ್ನು ಬಂಧಿಸಿ ಜೂನ್ 27ರಂದು ಆಯೋಗದ ಮುಂದೆ ವಿಚಾರಣೆಗೆ ಹಾಜರುಪಡಿಸುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.
ನಿನ್ನೆಯಷ್ಟೇ ಆರೋಪಿಯನ್ನು ನಾಳೆ ವಿಚಾರಣೆಗೆ ಹಾಜರುಪಡಿಸುವಂತೆ ಶಿವರಾಜನ್ ಅವರು ಸರಿತಾ ಪರ ವಕೀಲ ಸಿ ಡಿ ಜಾನಿ ಅವರಿಗೆ ಸೂಚಿಸಿತ್ತು. ಆದರೆ ತನ್ನ ಕಕ್ಷಿದಾರಳನ್ನು ಇಂದು ವಿಚಾರಣೆಗೆ ಹಾಜರುಪಡಿಸಿದ ಜಾನಿ, ಒಂದು ವಾರಗಳ ಕಾಲವಕಾಶ ನೀಡುವಂತೆ ಮನವಿ ಮಾಡಿದರು. ಇದರಿಂದ ಆಕ್ರೋಶಗೊಂಡ ನ್ಯಾಮೂರ್ತಿಗಳು, ಆರೋಪಿಯ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಿದ್ದಾರೆ.