ಮುಂಬೈ: ಮಹಾರಾಷ್ಟ್ರದ ರತ್ನಗಿರಿಯಲ್ಲಿ ಭಿನ್ನಾಭಿಪ್ರಾಯದಿಂದ ಜಗಳ ಮಾಡಿಕೊಂಡು ಸಿಐಎಸ್‌ಎಸ್ ಕಾನ್‌ಸ್ಟೇಬಲ್ ಒಬ್ಬರು, ತಮ್ಮ ಇಬ್ಬರು ಸಹೋದ್ಯೋಗಿಗಳನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ವರದಿಯಾಗಿದೆ.
ಕೇರಳ ಮೂಲದ ರನೀಶ್ (28), ಮಹಾರಾಷ್ಟ್ರದ ಮಲಂಗಾವ್ ನಿವಾಸಿ ಎಎಸ್‌ಐ ಬಾಲು ಗಣಪತಿ ಶಿಂದೆ (58) ಹತ್ಯೆಗೀಡಾದ ವ್ಯಕ್ತಿಗಳಾಗಿದ್ದಾರೆ. ಹರೀಶ್ ಕುಮಾರ್ ಗೌಡ್ ಎಂಬಾತ ಇವರನ್ನು ಗುಂಡಿಟ್ಟು ಹತ್ಯೆಗೈದಿದ್ದಾನೆ.
ರತ್ನಗಿರಿ ಗ್ಯಾಸ್ ಆ್ಯಂಡ್ ಪವರ್ ಕಂಪನಿಯಲ್ಲಿ ನಿಯೋಜನೆಯಾಗಿದ್ದ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ (ಸಿಐಎಸ್‌ಎಫ್)ನ ಕಾನ್‌ಸ್ಟೇಬಲ್ ಆಗಿದ್ದ ಹರೀಶ್ ಕುಮಾರ್ ಮಂಗಳವಾರ ರಾತ್ರಿ ಊಟದ ವೇಳೆ ಸಹೋದ್ಯೋಗಿಗಳೊಂದಿಗೆ ಜಗಳವಾಡಿದ್ದರು. ಈ ಜಗಳ ತಾರಕ್ಕೇರಿದ್ದು, ಹರೀಶ್‌ಕುಮಾರ್ ಅವರು ಶಿಂದೆ ಮತ್ತು ರನೀಶ್ ಮೇಲೆ ಗುಂಡು ಹಾರಿಸಿದ್ದಾರೆ.
ಗುಂಡು ಹಾರಿಸಿದ ನಂತರ ಈ ಬಗ್ಗೆ ಯಾರಲ್ಲೂ ಹೇಳಬೇಡಿ ಎಂದು ಅಲ್ಲಿ ಕಾರ್ಯ ನಿರತರಾಗಿದ್ದ ಸಿಐಎಸ್‌ಎಫ್ ಅಧಿಕಾರಿ ಬಲ್ವಾನ್ ಭಜೇಸಿಂಗ್ ಅವರಿಗೆ ಬೆದರಿಕೆಯನ್ನೊಡ್ಡಿದ್ದಾನೆ.
ಹರೀಶ್ ಕುಮಾರ್ ಅವರ ಸಿಟ್ಟನ್ನು ಶಾಂತಗೊಳಿಸುವ ಸಲುವಾಗಿ ಸಹೋದ್ಯೋಗಿಗಳು ಗರ್ಭಿಣಿಯಾಗಿರುವ ಆತನ ಪತ್ನಿ ಪ್ರಿಯಾಂಕಾ ಕುಮಾರಿ ಅವರನ್ನು ಘಟನಾ ಸ್ಥಳಕ್ಕೆ ಕರೆತರಲಾಯಿತು. ಅಲ್ಲಿಯೂ ಸುಮಾರು ಒಂದು ಗಂಟೆಗಳ ಕಾಲ ಆತ ಪ್ರಿಯಾಂಕಾಳೊಂದಿಗೆ ವಾಗ್ವಾದ ಮಾಡಿದ್ದಾನೆ. ನಂತರ ಪ್ರಿಯಾಂಕಳಿಗೂ ಗುಂಡಿಟ್ಟು, ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಗುಂಡು ತಾಗಿದ ಇವರಿಬ್ಬರನ್ನೂ ಕೂಡಲೇ ಚಿಪ್ಲುನ್ ನಲ್ಲಿರುವ ಆಸ್ಪತ್ರೆಗೆ ಸಾಗಿಸಿದ್ದು, ಇವರಿಬ್ಬರೂ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಧ್ಯಪ್ರದೇಶ ಮೂಲದ ಹರೀಶ್ ಕುಮಾರ್ ಗೌಡ್ ವಿರುದ್ಧ ಹತ್ಯೆ, ಹತ್ಯೆಗೆ ಯತ್ನ ಹಾಗೂ ಶಸ್ತ್ರ ಕೈವಶವಿರಿಸಿದ ಆರೋಪದಲ್ಲಿ ಪೊಲೀಸರು ಕೇಸು ದಾಖಲಿಸಿದ್ದಾರೆ.
ಕಾರ್ಯಸ್ಥಳದಲ್ಲಿ ನಡೆದ ಕಿರುಕುಳಗಳೇ ಈ ವಾಗ್ವಾದಕ್ಕೆ ಕಾರಣವಾಗಿರಬಹುದು ಎಂದು ಊಹಿಸಲಾಗಿದ್ದು, ಈ ಕೃತ್ಯಕ್ಕೆ ನಿಜವಾದ ಕಾರಣ ಏನೆಂಬುದನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.