ನವದೆಹಲಿ: ಗಡಿ ಪ್ರದೇಶ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿರುವ ಯೋಧರಿಗೆ ಸುರಕ್ಷಿತವಾದ ಮೊಬೈಲ್ ಫೋನ್ ಗಳನ್ನು ನೀಡಲಾಗುವುದು ಎಂದು ಗೃಹ ಖಾತೆ ರಾಜ್ಯ ಸಚಿವ ಹರಿಭಾಯ್ ಚೌಧರಿ ಹೇಳಿದ್ದಾರೆ.
8 ನೇ ಅಂತಾರಾಷ್ಟ್ರೀಯ ಭದ್ರತೆ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಹರಿಭಾಯ್ ಚೌಧರಿ " ಇಂದಿಗೂ ನಮ್ಮ ಯೋಧರ ಬಳಿ ಮೊಬೈಲ್ ಇಲ್ಲ ಎಂಬುದನ್ನು ಕೇಳಿದರೆ ನಿಮಗೆ ಅಚ್ಚರಿಯಾಗಬಹುದು, ನಕ್ಸಲ್ ಪೀಡಿತ ಪ್ರದೇಶ ಹಾಗೂ ಗಡಿ ಪ್ರದೇಶದಲ್ಲಿರುವ ಯೋಧರು ನಿರಂತರವಾಗಿ ತಮ್ಮ ಕುಟುಂಬದವರೊಂದಿಗೆ ಸಂಪರ್ಕದಲ್ಲಿರಲು ಸಹಕಾರಿಯಾಗುವಂತೆ ಸುರಕ್ಷಿತವಾದ ಮೊಬೈಲ್ ಗಳನ್ನು ನೀಡಲಾಗುವುದು" ಎಂದು ತಿಳಿಸಿದ್ದಾರೆ.
ನಮ್ಮ ಬಳಿ ದೂರವಾಣಿ ವಿನಿಮಯ ಕೇಂದ್ರವಿರುತ್ತದೆ. ಇದನ್ನು ಯೋಧರ ಬೆಟಾಲಿಯನ್ ಹೋದಲ್ಲೆಲ್ಲಾ ಕೊಂಡೊಯ್ಯಬಹುದಾದ ಹಿನ್ನೆಲೆಯಲ್ಲಿ ಯೋಧರಿಗೆ ನೀಡಲಾಗುವ ಮೊಬೈಲ್ ಕಾರ್ಯನಿರ್ವಹಣೆಗೆ ಅಡ್ಡಿಯುಂಟಾಗುವುದಿಲ್ಲ. ದೂರವಾಣಿ ವಿನಿಮಯ ಕೇಂದ್ರದ ಸಹಿತ ಸುರಕ್ಷಿತವಾದ ಮೊಬೈಲ್ ಸಂಪರ್ಕಗಳನ್ನು ನೀಡಲು ಅಮೆರಿಕದ ಸಂಸ್ಥೆಯೊಂದು ಮುಂದೆಬಂದಿದೆ. ಅಮೆರಿಕ ನಿಯೋಗದೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಹರಿಭಾಯ್ ಚೌಧರಿ ಹೇಳಿದ್ದಾರೆ.