ದೇಶ

ಮೀಸಲಾತಿ ನೀತಿ ಬದಲಾವಣೆ ಉದ್ದೇಶವಿಲ್ಲ: ಕೇಂದ್ರ ಸರ್ಕಾರ

Srinivas Rao BV

ನವದೆಹಲಿ: ಮೀಸಲಾತಿ ನೀತಿಯನ್ನು ಬದಲಾವಣೆ ಮಾಡುವ ಉದ್ದೇಶವಿಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿದೆ.

ಉನ್ನತ ವರ್ಗಗಳೂ ಸಹ ಮೀಸಲಾತಿಗೆ ಆಗ್ರಹಿಸುತ್ತಿದ್ದು ಇದು ಸಂವಿಧಾನದ ಆಶಯಕ್ಕೆ ಧಕ್ಕೆ ತರುತ್ತಿದೆ ಎಂಬ ಆರ್ ಎಸ್ಎಸ್ ಹೇಳಿಕೆಯನ್ನು ಪ್ರಸ್ತಾಪಿಸಿದ ಸಮಾಜವಾದಿ, ಬಹುಜನ್ ಸಮಾಜವಾದಿ ಪಕ್ಷಗಳು ಈ ಬಗ್ಗೆ ಸರ್ಕಾರದ ನಿಲುವನ್ನು ಪ್ರಶ್ನಿಸಿದವು. ವಿಪಕ್ಷ ಸದಸ್ಯರ ಪ್ರಶ್ನೆಗೆ ಉತ್ತರಿಸಿರುವ ಸರ್ಕಾರ, ಮೀಸಲಾತಿ ನೀತಿಯನ್ನು ಬದಲಾವಣೆ ಮಾಡುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಆರ್ ಎಸ್ ಎಸ್ ಹೇಳಿಕೆ ಬಗ್ಗೆ ವಿಪಕ್ಷಗಳು ಪ್ರಸ್ತಾಪಿಸಿದಾಗ ಮಧ್ಯ ಪ್ರವೇಶಿಸಿದ ರಾಜ್ಯಸಭೆಯ ಉಪಸಭಾಪತಿ ಪಿಜೆ ಕುರಿಯನ್, ಆರ್ ಎಸ್ಎಸ್ ಖಾಸಗಿ ಸಂಸ್ಥೆಯಾಗಿದ್ದು ಅದರ ಹೇಳಿಕೆ ಬಗ್ಗೆ ಸಂಸದರು ಚಿಂತೆ ಮಾಡಬೇಕಿಲ್ಲ ಎಂದು ಹೇಳಿದ್ದ ಘಟನೆಯು ನಡೆಯಿತು. ಆದರೆ ಪಿಜೆ ಕುರಿಯನ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಎಸ್ ಪಿ ನಾಯಕ ರಾಮ್ ಗೋಪಾಲ್ ಯಾದವ್, ಆರ್ ಎಸ್ ಎಸ್ ಹಾಗೂ ಸರ್ಕಾರದ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಿದ್ದಾರೆ. ಆರ್ ಎಸ್ಎಸ್ ಮೀಸಲಾತಿ ಕುರಿತ ಹೇಳಿಕೆಗಳ ಮೂಲಕ ಪ್ರಸ್ತುತ ಇರುವ ಮೀಸಲಾತಿಯನ್ನು ನಿರ್ನಾಮ ಮಾಡಲು ಯತ್ನಿಸುತ್ತಿದೆ ಎಂದು ಬಿಎಸ್ ಪಿ ನಾಯಕಿ ಮಾಯಾವತಿ ಆರೋಪಿಸಿದ್ದಾರೆ.

SCROLL FOR NEXT