ನವದೆಹಲಿ: ತೆರಿಗೆ ವಂಚನೆ ಬಗ್ಗೆ ಸಂಸತ್ ನಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ್ದ ವಿತ್ತ ಸಚಿವ ಅರುಣ್ ಜೆಟ್ಲಿ, ಕೃಷಿ ಆದಾಯದ ಹೆಸರಿನಲ್ಲಿ ತೆರಿಗೆ ವಂಚನೆ ಮಾಡುತ್ತಿರುವ ಪ್ರಮುಖ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂದಿದ್ದರು. ಕೃಷಿ ಆದಾಯದ ಹೆಸರಿನಲ್ಲಿ ಅಕ್ರಮವಾಗಿ ತೆರಿಗೆ ವಿನಾಯ್ತಿ ಪಡೆಯುತ್ತಿರುವ ಹೆಚ್ಚು ಪ್ರಕರಣಗಳಿರುವುದು ಬೆಂಗಳೂರಿನಲ್ಲಿ ಎಂಬುದು ತಾಜಾ ಸುದ್ದಿ.
ಆದಾಯ ತೆರಿಗೆ ವ್ಯಾಪ್ತಿಗೆ ಬರುವ ಆದಾಯವನ್ನು ಕೃಷಿ ಗಳಿಕೆ ಎಂದು ಹೇಳಿರುವ ಒಟ್ಟು 2,746 ಪ್ರಕರಣಗಳ ಪೈಕಿ 321 ಪ್ರಕರಣಗಳು ಬೆಂಗಳೂರಿನದ್ದಾಗಿವೆ. ಆದಾಯ ತೆರಿಗೆ ಇಲಾಖೆಯ ಗೌಪ್ಯ ಪತ್ರದಲ್ಲಿರುವ ಮಾಹಿತಿ ಪ್ರಕಾರ ದೆಹಲಿಯಲ್ಲಿ 275 ಪ್ರಕರಣಗಳು, ಚೆನ್ನೈ ನಲ್ಲಿ 181 ಪ್ರಕರಣಗಳು, ಹಾಗೂ ಅತಿ ಹೆಚ್ಚು ಅಂದರೆ 321 ಪ್ರಕರಣಗಳು ಬೆಂಗಳೂರಿನಲ್ಲಿ ಕಂಡುಬಂದಿವೆ.
ದೇಶಾದ್ಯಂತ ದಾಖಲಾದ ಒಟ್ಟು 2 ,746 ಪ್ರಕರಣಗಳಲ್ಲಿ 1 ಕೋಟಿಗೂ ಮೀರಿದ ಕೃಷಿ ಆದಾಯವನ್ನು ತೋರಿಸಲಾಗಿದೆ. 2007 ಹಾಗೂ 2015 -16 ರಲ್ಲಿ ಆದಾಯ ತೆರಿಗೆ ಇಲಾಖೆಗೆ ನೀಡಲಾಗಿರುವ ಮಾಹಿತಿಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಆದಾಯ ತೆರಿಗೆ ಕಾಯಿದೆಯ ನಿಬಂಧನೆಗಳನ್ನು ಉಲ್ಲಂಘನೆ ಮಾಡುತ್ತಿರುವವರ ವಿರುದ್ಧ, ಕೃಷಿ ಆದಾಯದ ಹೆಸರಿನಲ್ಲಿ ತೆರಿಗೆ ವಂಚನೆ ಮಾಡುತ್ತಿರುವವರ 'ಪ್ರಮುಖ ವ್ಯಕ್ತಿಗಳ' ವಿರುದ್ಧ ಈಗಾಗಲೇ ಐಟಿ ತನಿಖೆ ನಡೆಸುತ್ತಿದೆ ಎಂದು ಸಂಸತ್ ನಲ್ಲಿ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಮುಂಬೈನಲ್ಲಿ 212 ಪ್ರಕರಣ, ಕೊಯಂಬತ್ತೂರಿನಲ್ಲಿ 106 , ಕೊಚ್ಚಿಯಲ್ಲಿ 109 ಪ್ರಕರಣಗಳು, ಹೈದರಾಬಾದ್ ನಲ್ಲಿ 162, ಪುಣೆಯಲ್ಲಿ 192 ಕೋಲ್ಕತಾದಲ್ಲಿ 239 ಹಾಗೂ ತಿರುವನಂತಪುರಮ್ ನ 157 ಪ್ರಕರಣಗಳ ಬಗ್ಗೆ ಐಟಿ ತನಿಖೆ ನಡೆಸುತ್ತಿದೆ.