ಮುಂಬೈ: ಹತ್ತು ವರ್ಷಗಳ ವಿರಾಮದ ನಂತರ ಮುಂಬೈ ಸೇರಿದಂತೆ ಮಹಾರಾಷ್ಟ್ರ ರಾಜ್ಯದಲ್ಲಿ ಮತ್ತೆ ಡಾನ್ಸ್ ಬಾರ್ ಗಳು ತೆರೆಯುತ್ತಿವೆ. ಇಲ್ಲಿ ಮಹಿಳೆಯರನ್ನು ಮತ್ತು ಯವತಿಯರ ಸಾಗಾಣಿಕೆ ಮತ್ತು ದುರುಪಯೋಗ ನಡೆಯುವ ಸಾಧ್ಯತೆಯಿದೆಯೆಂದು ಕಾರ್ಯಕರ್ತರು ವಿರೋಧಿಸುತ್ತಿದ್ದರೆ, ಕಾನೂನುಪ್ರಕಾರ ನಡೆಸಲಾಗುವುದು ಎಂದು ಹೇಳಿದೆ.
ಬಾರು ಮತ್ತು ರೆಸ್ಟೋರೆಂಟ್ ಗಳಲ್ಲಿ ಹಣಕ್ಕಾಗಿ ಪುರುಷರ ಎದುರು ಕಡಿಮೆ ಬಟ್ಟೆ ಧರಿಸಿ ಯುವತಿಯರು ಕುಣಿಯುವುದಕ್ಕೆ ಮಹಾರಾಷ್ಟ್ರ ಸರ್ಕಾರ 2005ರಲ್ಲಿ ನಿಷೇಧ ಹೇರಿತ್ತು.
ಸರ್ಕಾರದ ನಿಷೇಧವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಷರತ್ತು ಮೇರೆಗೆ ಡಾನ್ಸ್ ಬಾರುಗಳನ್ನು ನಡೆಸುವಂತೆ ಹೇಳಿ ನಿನ್ನೆಯಿಂದ ಅನುಮತಿ ನೀಡಿ ಆದೇಶ ಹೊರಡಿಸಿದೆ.
2005ರಲ್ಲಿ ಮುಂಬೈಯಲ್ಲಿ ಡಾನ್ಸ್ ಬಾರುಗಳು ನಿಷೇಧಕ್ಕೊಳಪಟ್ಟಿದ್ದಾಗ ಸುಮಾರು 75 ಸಾವಿರ ಮಂದಿ ಮಹಿಳೆಯರು ಕೆಲಸ ಕಳೆದುಕೊಂಡಿದ್ದರು. ಆದರೆ ಸಾಮಾಜ ಕಾರ್ಯಕರ್ತರು ಮತ್ತು ಚಾರಿಟಿಗಳು ಹೇಳುವ ಪ್ರಕಾರ, ಡಾನ್ಸ್ ಬಾರುಗಳ ಮೂಲಕ ಮಹಿಳೆಯರ ಸಾಗಾಟ ಮತ್ತು ವೇಶ್ಯಾವಾಟಿಕೆ ನಡೆಯುತ್ತಿತ್ತು.
ಕಳೆದ ವಾರ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ರಾಜ್ಯ ಸರ್ಕಾರ ಡಾನ್ಸ್ ಬಾರ್ ಗಳ ಮರು ಆರಂಭವನ್ನು ಸ್ವಾಗತಿಸುವುದಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿಗೆ ಶಾಸನವನ್ನು ರಚಿಸಲು ಸರ್ಕಾರ ಬಯಸುತ್ತದೆ ಎಂದು ಹೇಳಿದ್ದರು.
ಮುಂಬೈ ನಗರದಲ್ಲಿ ಸುಮಾರು 150 ಬಾರ್ ಮತ್ತು ಹೊಟೇಲ್ ಗಳು, ಇಡೀ ರಾಜ್ಯದಲ್ಲಿ ಸುಮಾರು ಸಾವಿರದ 200 ಬಾರುಗಳು ಅನುಮತಿಗಾಗಿ ಅರ್ಜಿ ಸಲ್ಲಿಸಿವೆ.
ದಕ್ಷಿಣ ಏಷ್ಯಾದಲ್ಲಿ ಭಾರತವು ಬಹಳ ವೇಗವಾಗಿ ಮಾನವ ಕಳ್ಳಸಾಗಣೆ ಹೊಂದಿರುವ ದೇಶವಾಗಿದ್ದು, ಇಲ್ಲಿನ ವಾಣಿಜ್ಯ ನಗರಿ ಮುಂಬೈಯಲ್ಲಿ ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಣೆ ಎಗ್ಗಿಲ್ಲದೆ ನಡೆಯುತ್ತಿದೆ.
ಬೇರೆ ರಾಜ್ಯಗಳಿಂದ ಅಥವಾ ಬೇರೆ ದೇಶಗಳಿಂದ ಮಹಿಳೆಯರಿಗೆ ಉತ್ತಮ ಕೆಲಸ ಕೊಡಿಸುವುದಾಗಿ ನಂಬಿಸಿ ಕರೆತಂದು ಮುಂಬೈಯಲ್ಲಿ ಲೈಂಗಿಕ ವೃತ್ತಿಗೆ ಅಥವಾ ಇತರ ಕೂಲಿ ಕೆಲಸಗಳಿಗೆ ನೂಕಲಾಗುತ್ತದೆ.
ಅಶ್ಲೀಲತೆ ಹೆಸರಿನಲ್ಲಿ ಮಹಾರಾಷ್ಟ್ರ ಸರ್ಕಾರ ಡಾನ್ಸ್ ಬಾರ್ ಗಳಿಗೆ ನಿಷೇಧ ಹೇರಿತ್ತು. ಆದರೆ ಈಗ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ್ನು ಜಾರಿಗೆ ತರಲು ಸರ್ಕಾರ 12 ಷರತ್ತುಗಳನ್ನು ಪ್ರಸ್ತಾಪಿಸಿತ್ತು. ಅವುಗಳಲ್ಲಿ ಸುಪ್ರೀಂ ಕೋರ್ಟ್ ಕೆಲವನ್ನು ತಿರಸ್ಕರಿಸಿದೆ.
ಬಾರ್ ಗಳ ಪ್ರವೇಶ ದ್ವಾರದಲ್ಲಿ ಸಿಸಿಟಿವಿ ಅಳವಡಿಸುವುದು, ಪ್ರತಿ ಬಾರ್ ಗೆ ನಾಲ್ಕು ಮಂದಿ ಡಾನ್ಸರ್ ಗಳನ್ನು ಮಾತ್ರ ಬಿಡುವುದು, ಪ್ರದರ್ಶನ ನಡೆಯುವ ಪ್ರದೇಶದ ಸುತ್ತ ಕಂಬಿಬೇಲಿ ರಚಿಸಬೇಕೆಂದು, ವೇದಿಕೆ ಮತ್ತು ಗ್ರಾಹಕರ ನಡುವೆ ಕನಿಷ್ಟ 5 ಅಡಿ ಅಂತರವಿರಬೇಕು, ಅಶ್ಲೀಲ ರೀತಿಯಲ್ಲಿ ಮಹಿಳೆಯರು ಡಾನ್ಸ್ ಮಾಡಬಾರದು, ಗ್ರಾಹಕರು ನೃತ್ಯ ಮಾಡುವವರೆಡೆಗೆ ಹಣ ಎಸೆಯಬಾರದೆಂದು ಸುಪ್ರೀಂ ಕೋರ್ಟ್ ನಿಯಮ ಮಾಡಿದೆ.
ಆದರೆ ಬಾರ್ ಮತ್ತು ಹೊಟೇಲ್ ಮಾಲಿಕರು ಈ ಎಲ್ಲಾ ನಿಯಮಗಳನ್ನು ಒಪ್ಪುತ್ತಿಲ್ಲ. ನಿಯಮಗಳು ಅವಿವೇಕವಾಗಿದೆ ಎಂದು ಹೇಳಿದೆ. ಜೀವನಾಧಾರ ಕಳೆದುಕೊಂಡ ಮಹಿಳೆಯರಿಗೆ ಕಳೆದ ಹತ್ತು ವರ್ಷಗಳಲ್ಲಿ ಮಹಾರಾಷ್ಟ್ರ ಸರ್ಕಾರ ಏನು ಪುನರ್ವಸತಿ ಕಲ್ಪಿಸಿದೆ? ಎಂದು ಕೇಳುತ್ತಾರೆ ಭಾರತೀಯ ಹೊಟೇಲ್ ಮತ್ತು ರೆಸ್ಟೋರೆಂಟ್ ಒಕ್ಕೂಟದ ಮುಖ್ಯಸ್ಥ ಆದರ್ಶ್ ಶೆಟ್ಟಿ.
ಡಾನ್ಸ್ ಬಾರ್ ನಲ್ಲಿ ಕೆಲಸ ಕಳೆದುಕೊಂಡ ಅನೇಕ ಮಹಿಳೆಯರು ವೇಶ್ಯಾವೃತ್ತಿಗಿಳಿದಿದ್ದಾರೆ ಅಥವಾ ಗಲ್ಫ್ ದೇಶಕ್ಕೆ ಕಳ್ಳಸಾಗಾಣೆ ಮಾಡಲಾಗಿದೆ ಎನ್ನುತ್ತಾರೆ ಮುಂಬೈಯ ಡಾನ್ಸ್ ಬಾರ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಭರತ್ ಠಾಕೂರ್ .