ಡೆಹ್ರಾಡೂನ್: ಬಿಜೆಪಿ ತಪ್ಪು ಮಾಹಿತಿ ನೀಡುತ್ತಿದೆ ಎಂದು ಆರೋಪಿಸಿರುವ ಉತ್ತರಾಖಂಡ್ ಮುಖ್ಯಮಂತ್ರಿ ಹರಿಶ್ ರಾವತ್ ಅವರು, ತಮಗೆ ವಿಧಾನಸಭೆಯಲ್ಲಿ ಬಹುಮತವಿದ್ದು, ಅದನ್ನು ಸಾಬೀತುಪಡಿಸಲು ಸಿದ್ಧ ಎಂದು ಶನಿವಾರ ಹೇಳಿದ್ದಾರೆ.
ತಮಗೆ 35 ಶಾಸಕರ ಬೆಂಬಲವಿದೆ ಎಂದು ಬಿಜೆಪಿಯವರು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದಿರುವ ರಾವತ್, ಆದರೆ ವಿಧಾನಸಭೆಯಲ್ಲಿ ನಾನು ಇನ್ನೂ ಸಂಪೂರ್ಣ ಬಹುಮತ ಹೊಂದಿದ್ದೇನೆ ಎಂಬ ವಿಶ್ವಾಸವಿದೆ ಮತ್ತು ಸದನದಲ್ಲಿ ಅದನ್ನು ಸಾಬೀತುಪಡಿಸುತ್ತೇನೆ ಎಂದಿದ್ದಾರೆ.
ವಿಧಾನಸಭೆ ಸ್ವೀಕರ್ ಗೋವಿಂದ್ ಸಿಂಗ್ ಕುಂಜವಾಲ್ ಅವರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ನಮ್ಮ ಎಲ್ಲಾ ಶಾಸಕರು ಪಕ್ಷದೊಂದಿಗೆ ಇರುವುದಾಗಿ ಮತ್ತು ಪಕ್ಷದಲ್ಲೇ ಮುಂದುವರೆಯುವುದಾಗಿ ಹೇಳಿದ್ದಾರೆ ಎಂದರು.
9 ಬಂಡಾಯ ಕಾಂಗ್ರೆಸ್ ಶಾಸಕರು ಸೇರಿದಂತೆ ತಮಗೆ 35 ಶಾಸಕರ ಬೆಂಬಲವಿರುವುದಾಗಿ ಬಿಜೆಪಿ ಹೇಳಿತ್ತು.
ಉತ್ತರಾಖಂಡ ವಿಧಾನಸಭೆಯು ಒಟ್ಟು 70 ಸದಸ್ಯರನ್ನು ಹೊಂದಿದೆ. ಇದರಲ್ಲಿ ಕಾಂಗ್ರೆಸ್ 36 ಸ್ಥಾನಗಳನ್ನು ಪಡೆದು ಅಧಿಕಾರದ ಗದ್ದುಗೆ ಹಿಡಿದಿದೆ. ಬಿಜೆಪಿ 28 ಸ್ಥಾನಗಳನ್ನು ಗೆದ್ದಿತ್ತು. ಈಗ ಕಾಂಗ್ರೆಸ್‌ನ 9 ಶಾಸಕರು ಬಿಜೆಪಿಗೆ ಬೆಂಬಲ ಸೂಚಿಸಿರುವುದರಿಂದ ಕಾಂಗ್ರೆಸ್ ಪಕ್ಷ ಬಹುಮತ ಕಳೆದುಕೊಂಡಿದೆ ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೆ ಬಂಡಾಯ ಕಾಂಗ್ರೆಸ್ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಲು ಮುಂದಾಗಿದೆ.