ನವದೆಹಲಿ: ಪಾಕಿಸ್ತಾನ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಇಮ್ರಾನ್ ಖಾನ್ ಭಾನುವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು.
ಕೇಜ್ರಿವಾಲ್ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಇಮ್ರಾನ್ ಖಾನ್, ನನ್ನ ಮತ್ತು ಕೇಜ್ರಿವಾಲ್ ಅವರ ಅನುಭವಗಳಲ್ಲಿ ಹೋಲಿಕೆ ಇದೆ. ಇಬ್ಬರು ಸಮಾನವಾದ ಕಷ್ಟಗಳನ್ನು ಎದುರಿಸಿದ್ದೇವೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲು ಪಕ್ಷ ಸ್ಥಾಪನೆ ಮಾಡಿದ್ದೇವೆ. ಉತ್ತಮ ಆಡಳಿತ ನೀಡಲು ಇಬ್ಬರು ಬದ್ದರಾಗಿದ್ದು ಮುಂದಿನ ದಿನಗಳಲ್ಲಿ ಇದೇ ವಿಷಯಗಳ ವಿರುದ್ಧ ಚರ್ಚೆಗೆ ನಾವು ಸಂಪರ್ಕದಲ್ಲಿರುತ್ತೇವೆ ಎಂದರು.
ಇನ್ನು ಈ ಸಂಬಂಧ ತಮ್ಮ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಕೇಜ್ರಿವಾಲ್ ಇಬ್ಬರ ಭೇಟಿ ಹಲವು ಅನುಭವಗಳನ್ನು ಹಂಚಿಕೊಳ್ಳಲು ಸಹಾಯವಾಯಿತು. ಜೊತೆಗೆ ಕೋಲ್ಕೊತಾದಲ್ಲಿ ನಡೆದ ಪಾಕ್ ಮತ್ತು ಭಾರತ ಕ್ರಿಕೆಟ್ ಪಂದ್ಯದ ಬಗ್ಗೆಯೂ ಚರ್ಚೆ ಮಾಡಲಾಯಿತು ಎಂದು ಟ್ವೀಟ್ ಮಾಡಿದ್ದಾರೆ.