ನವದೆಹಲಿ: ಬೆಲ್ಜಿಯಂನ ಬ್ರುಸೆಲ್ಸ್ ನಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ನಂತರ ನಾಪತ್ತೆಯಾಗಿರುವ ನಗರದ ಇನ್ಫೋಸಿಸ್ ಸಂಸ್ಥೆಯ ಉದ್ಯೋಗಿ ರಾಘವೇಂದ್ರ ಗಣೇಶನ್ ಗಾಗಿ ಹುಡುಕಾಟ ಆರಂಭಿಸಲಾಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಬುಧವಾರ ಹೇಳಿದ್ದಾರೆ.
ಈ ಕುರಿತಂತೆ ಮಾಡನಾಡಿರುವ ಅವರು, ರಾಘವೇಂದ್ರ ಗಣೇಶನ್ ಅವರನ್ನು ಹುಡುಕುವ ಕಾರ್ಯದಲ್ಲಿ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ತೊಡಗಿದ್ದು, ಸಾಧ್ಯವಾದಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇನ್ನು ಸ್ಫೋಟದ ವೇಳೆ ಗಾಯಗೊಂಡಿದ್ದ ಜೆಟ್ ಏರ್ವೇಸ್ ನ ಸಿಬ್ಬಂದಿ ನಿಧಿ ಛಾಪೆಕರ್ ಹಾಗೂ ಅಮಿತ್ ಮೋಟ್ವಾನಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಇಬ್ಬರಿಗೂ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಬ್ರುಸೆಲ್ಸ್ ನಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ 34 ಮಂದಿ ಸಾವನ್ನಪ್ಪಿ, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಸ್ಫೋಟದ ಸಂಭವಿಸಿದ ನಂತರ ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯ ಉದ್ಯೋಗಿಯಾಗಿರುವ ರಾಘವೇಂದ್ರ ಅವರು ನಾಪತ್ತೆಯಾಗಿರುವುದಾಗಿ ಹೇಳಲಾಗುತ್ತಿತ್ತು.
ಈ ಬಗ್ಗೆ ಬ್ರುಸೆಲ್ಸ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ದೃಢಪಡಿಸಿತ್ತು. ಅಲ್ಲದೆ, ರಾಘವೇಂದ್ರನ್ ಅವರ ಪತ್ತೆಗಾಗಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿತ್ತು.
ಭಾರತದ 2ನೇ ಅತಿದೊಡ್ಡ ಐಟಿ ಸಂಸ್ಥೆಯೆಂದೇ ಖ್ಯಾತಿ ಪಡೆದಿರುವ ಇನ್ಫೋಸಿಸ್ ಸಂಸ್ಥೆಯ ಉದ್ಯೋಗಿಯಾಗಿರುವ ರಾಘವೇಂದ್ರ ಗಣೇಶನ್ ಅವರು ಬೆಲ್ಜಿಯಂನ ಬ್ರುಸೆಲ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸ್ಫೋಟ ಸಂಭವಿಸಿದ ನಂತರ ರಾಘವೇಂದ್ರ ಅವರನ್ನು ಸಂಪರ್ಕಿಸಲು ಎಷ್ಟು ಬಾರಿ ಯತ್ನಿಸಿದ್ದರು ಸಂಪರ್ಕಕ್ಕೆ ಸಿಗುತ್ತಿಲ್ಲ. ಆದರೆ, ಅವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಬೆಲ್ಜಿಯಂ ನ ಭಾರತೀಯ ರಾಯಭಾರಿ ಕಚೇರಿ ಹೇಳಿಕೊಂಡಿದೆ.
ಸ್ಫೋಟ ಸಂಭವಿಸುವುದಕ್ಕೂ ಮುನ್ನ ತಾಯಿಯೊಂದಿಗೆ ಮಾತನಾಡಿದ್ದ ಟೆಕ್ಕಿ
ಮೂಲಗಳ ಪ್ರಕಾರ ರಾಘವೇಂದ್ರ ಗಣೇಶನ್ ಅವರ ಕುಟುಂಬಸ್ಥರು ಈಗಾಗಲೇ ಮಗನನ್ನು ಹುಡುಕುವಂತೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರವೊಂದನ್ನು ಬರೆದಿದ್ದು, ಪತ್ರದಲ್ಲಿ ಘಟನೆ ನಡೆಯುವುದಕ್ಕೂ 1 ಗಂಟೆಗೂ ಮುನ್ನ ಮಗ ನನ್ನೊಂದಿಗೆ ಫೋನಿನಲ್ಲಿ ಮಾತನಾಡಿದ್ದ. ಸಂಭಾಷಣೆ ವೇಳೆ ಮಗನು ಮೆಟ್ರೋ ಸ್ಟೇಷನ್ ನಲ್ಲಿದ್ದೇನೆಂದು ಹೇಳಿದ್ದ ಎಂದು ಆಕೆಯ ತಾಯಿ ಹೇಳಿಕೊಂಡಿದ್ದಾರೆನ್ನಲಾಗಿದೆ.
ನನ್ನ ಮಗ ಪ್ರತಿನಿತ್ಯ ಮೆಟ್ರೋ ಸ್ಟೇಷನ್ ಮೂಲಕ ಪ್ರಯಾಣ ಮಾಡುತ್ತಿದ್ದ. ಸ್ಫೋಟ ಸಂಭವಿಸಿದ ನಂತರ ಆತ ಯಾರಿಗೂ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಗಣೇಶನ್ ಅವರ ತಾಯಿ ಅನ್ನಪೂರ್ಣೇಶ್ವರಿ ಅವರು ಹೇಳಿಕೊಂಡಿದ್ದಾರೆ.
ರಾಘವೇಂದ್ರ ಗಣೇಶನ್ ಅವರ ತಾಯಿ ಮೂಲತಃ ತಮಿಳುನಾಡಿನವರಾಗಿದ್ದು, ಮದುವೆಯಾದ ನಂತರ 32 ವರ್ಷಗಳ ಹಿಂದೆ ಮುಂಬೈಗೆ ವರ್ಗಾವಣೆಯಾಗಿದ್ದರು. ಚೆನ್ನೈನಲ್ಲಿ ಜನ್ಮ ಪಡೆದ ರಾಘವೇಂದ್ರ ಅವರು ಮುಂಬೈ ನಲ್ಲಿ ವಿದ್ಯಾಭ್ಯಾಸ ಮುಗಿಸಿ ನಂತರ ವಾಣಿಯಮ್ಬಾಡಿ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಮಾಡಿದ್ದರು. ಇಂಜಿನಿಯರಿಂಗ್ ನಂತರ ನಗರದ ಇನ್ಫೋಸಿಸ್ ಸಂಸ್ಥೆಯ ಉದ್ಯೋಗಿಯಾಗಿ ಸೇರಿದ ಇವರು ಬೆಲ್ಜಿಯಂನ ಬ್ರುಸೆಲ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.