ಕೊಚ್ಚಿ: ಏಪ್ರಿಲ್ 28 ರಂದು ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಕಾನೂನು ವಿದ್ಯಾರ್ಥಿನಿಯಾಗಿದ್ದ ಜಿಶಾ ಎಂಬಾಕೆಯನ್ನು ಪೈಶಾಚಿಕ ರೀತಿಯಲ್ಲಿ ಅತ್ಯಾಚರವೆಸಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯ ರೇಖಾಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದಂತೆ ದಲಿತ ವಿದ್ಯಾರ್ಥಿನಿಯಾದ ಜಿಶಾಳನ್ನು ಅತ್ಯಾಚಾರಗೈಯ್ಯಲಾಗಿತ್ತು. ಅತ್ಯಾಚಾರಗೈದ ದುಷ್ಕರ್ಮಿಗಳು ಈಕೆಯ ತಲೆಯನ್ನು ಜಜ್ಜಿ, ದೇಹದೊಳಗೆ ಕಬ್ಬಿಣದ ರಾಡ್ ತೂರಿಸಿ ಕರುಳನ್ನೇ ಬಗೆದಿದ್ದರು. ಈಕೆಯ ದೇಹದಲ್ಲಿ 30 ಗಾಯಗಳು ಕಂಡು ಬಂದಿವೆ. ಬೆನ್ನಿನಲ್ಲಿ ಕಚ್ಚಿದ ಗಾಯಗಳೂ ಇತ್ತು.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಲ್ಲಿಂದ ಸಾಕ್ಷ್ಯಗಳನ್ನು ಕಲೆ ಹಾಕಿ ಫೋರೆನ್ಸಿಕ್ ತಜ್ಞರಿಗೆ ಕಳುಹಿಸಿಕೊಟ್ಟಿದ್ದಾರೆ.
ಜಿಶಾ ಅತ್ಯಾಚಾರಕ್ಕೊಳಗಾಗಿ ಒಂದು ವಾರವಾಗಿದ್ದರೂ ಇಲ್ಲಿಯವರೆಗೆ ಯಾರೊಬ್ಬರನ್ನೂ ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಈ ಬಗ್ಗೆ ಪೊಲೀಸರ ವಿರುದ್ಧ ನಾಗರಿಕರು ಆಕ್ರೋಶ ವ್ಯಕ್ತ ಪಡಿಸಿದ್ದರು. ಆದಾಗ್ಯೂ, ಶೀಘ್ರದಲ್ಲೇ ತಪ್ಪಿತಸ್ಥರನ್ನು ಬಂಧಿಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದು, ತನಿಖೆ ಮುಂದುವರಿದಿದೆ.
ಜಿಶಾಳ ಸಾವಿನಿಂದ ಶಾಕ್‌ಗೊಳಗಾಗಿ ಆಕೆಯ ಅಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ಬೆಳಗ್ಗೆ ಜಶಾಳ ಅಮ್ಮನನ್ನು ಭೇಟಿಯಾದ ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಇದೀಗ ಕೇರಳದಲ್ಲಿ ವಿಧಾನಸಭಾ ಚುನಾವಣೆಯ ಬಿಸಿಯೇರಿದ್ದು, ವಿದ್ಯಾರ್ಥಿ ಸಂಘಟನೆಗಳು ಮತ್ತು ಮಹಿಳಾ ಸಂಘಟನೆಗಳು ಚಾಂಡಿ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿವೆ.
ಏಪ್ರಿಲ್ 28ರಂದು ಜಿಶಾ ಅವರ ಮನೆಯ ಪರಿಸರದಲ್ಲಿ ಯುವಕನೊಬ್ಬ ಅಡ್ಡಾಡ್ಡಿದ್ದು ಕಂಡಿತ್ತು. ನೆರೆಹೊರೆಯವರು ನೀಡಿದ ಈ ಮಾಹಿತಿಯನ್ನಾಧರಿಸಿ ಯುವಕನ ರೇಖಾಚಿತ್ರ ರಚಿಸಲಾಗಿದೆ.