ಡೆಹ್ರಾಡೂನ್: ಉತ್ತರಾಖಂಡ ಭೀಕರ ಕಾಡ್ಗಿಚ್ಚು ತಹಬದಿಗೆ ಬಂದಿದ್ದು, ಮಂಗಳವಾರ ರಾತ್ರಿ ಸುರಿದ ಭಾರಿ ಮಳೆ ಕಾಡ್ಗಿಚ್ಚನ್ನು ತಹಬದಿಗೆ ತರುವಲ್ಲಿ ಯಶಸ್ವಿಯಾಗಿದೆ.
ಉತ್ತರಾಖಂಡ ಭೀಕರ ಕಾಡ್ಗಿಚ್ಚು ನಂದಿಸಲು ಎನ್ ಡಿಆರ್ ಎಫ್ ನ 134 ಮಂದಿ ಸಿಬ್ಬಂದಿಗಳು ಸೇರಿದಂತೆ 6 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಸೇರಿ ಸೇನಾ ಹೆಲಿಕಾಪ್ಟರ್ ಬಳಸಿ ಸಮರೋಪಾದಿಯಲ್ಲಿ ನಡೆಸುತ್ತಿದ್ದ ಕಾರ್ಯಾಚರಣೆಗೆ ಈಗ ಪ್ರಕೃತಿ ಕೂಡ ಸಾಥ್ ನೀಡಿದ್ದು, ನಿನ್ನೆ ರಾತ್ರಿ ಧಾರಾಕಾರವಾಗಿ ಸುರಿದ ಮಳೆ ಕಾಡ್ಗಿಚ್ಚನ್ನು ತಹಬದಿಗೆ ತಂದಿದೆ. ಮಳೆಯಿಂದಾಗಿ ಕಾಡ್ಗಿಚ್ಚು ತಹಬದಿಗೆ ಬಂದಿದ್ದು, ಇದರಿಂದ ಉತ್ತರಾಖಂಡ ಜನತೆ ಮತ್ತು ಸರ್ಕಾರಕ್ಕೆ ಇದರಿಂದ ನೆಮ್ಮದಿ ದೊರಕಿದಂತಾಗಿದೆ.
ನಿನ್ನೆ ಮಧ್ಯರಾತ್ರಿ ಆರಂಭವಾದ ಮಳೆ ಬುಧವಾರ ಬೆಳಗಿನ ಜಾವದವರೆಗೂ ಮುಂದುವರೆದಿತ್ತು. ರುದ್ರಪ್ರಯಾಗ, ಕೇದಾರನಾಥ್, ಗೌರಿಕುಂಡ, ಚಮೋಲಿ ಮತ್ತು ಉತ್ತರಕಾಶಿ, ಪಿತೋರ್ಘರ್ ಜಿಲ್ಲೆಯ ಕೆಲಭಾಗಗಳಲ್ಲಿ ಧಾರಾಕಾರ ಮಳೆಯಾಗಿದೆ. ಬಿಸಿಲ ಬೇಗೆ ಮತ್ತು ಕಾಡ್ಗಿಚ್ಚಿನ ತಾಪದಿಂದ ಬೆಂದುಹೋಗಿದ್ದ ಉತ್ತರ ಖಂಡ ಜನತೆಗೆ ವರುಣದೇವ ತಂಪೆರೆದಿದ್ದಾನೆ. ಇದಷ್ಟೇ ಅಲ್ಲದೆ ಮುಂದಿನ 72 ಗಂಟೆಗಳವರೆಗೂ ರಾಜ್ಯದ ವಿವಿಧೆಡೆ ಮಳೆ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಡೆಹ್ರಾಡೂನ್ನ ಹವಾಮಾನ ಇಲಾಖೆ ನಿರ್ದೇಶಕ ವಿಕ್ರಂ ಸಿಂಗ್ ತಿಳಿಸಿದ್ದಾರೆ.
ಮುಂದುವರೆದ ಕಾರ್ಯಾಚರಣೆ
ಇನ್ನು ರಾತ್ರಿ ಸುರಿದ ಭಾರಿ ಮಳೆದೆ ಕಾಡ್ಗಿಚ್ಚು ತಹಬದಿಗೆ ಬಂದಿದೆಯಾದರೂ ಮತ್ತೆ ಕಾಡ್ಗಿಚ್ಚು ಯಾವುದೇ ಕ್ಷಣದಲ್ಲಿ ಬೇಕಾದರೂ ಹಬ್ಬಬಹುದು. ಹೀಗಾಗಿ ಕಾಡ್ಗಿಚ್ಚನ್ನು ಸಂಪೂರ್ಣವಾಗಿ ನಂದಿಸಲು ಕಾರ್ಯಾಚರಣೆಯನ್ನು ಮುಂದುರೆಸಲಾಗುತ್ತಿದೆ. ಉತ್ತರಾಖಂಡ ರಾಜ್ಯದ ಸುಮಾರು 2900 ಹೆಕ್ಟೇರ್ ಅರಣ್ಯಪ್ರದೇಶ ಈಗಾಗಲೇ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದ್ದು, ಗಢವಾಲ್ ಜಿಲ್ಲೆಯೊಂದರಲ್ಲೇ ಅತಿ ಹೆಚ್ಚು ಅಂದರೆ 1200 ಹೆಕ್ಟೇರ್, ಕುಮಾವು ಜಿಲ್ಲೆಯ 1100 ಹೆಕ್ಟೇರ್ ಅರಣ್ಯ ಸಂಪೂರ್ಣ ಭಸ್ಮವಾಗಿದೆ. ಬೆಂಕಿ ಇನ್ನೇನು ಜಿಮ್ ಕಾರ್ಬೆಟ್ ರಾಷ್ಟ್ರೀಯ ರಕ್ಷಿತಾರಣ್ಯಕ್ಕೂ ಹಬ್ಬುವ ಹಂತದಲ್ಲಿ ಮಳೆ ಸುರಿದಿದ್ದು, ಸಂಭವಿಸಬಹುದಾಗಿದ್ದ ಅವಘಡಕ್ಕೆ ವರುಣ ದೇವ ಬ್ರೇಕ್ ಹಾಕಿದ್ದಾನೆ.
ಈ ಬಗ್ಗೆ ಮಾತನಾಡಿರುವ ಕಾರ್ಬೆಟ್ ರಕ್ಷಿತಾರಣ್ಯದ ನಿರ್ದೇಶಕ ಸಮೀರ ಸಿನ್ಹಾ ಅವರು, ರಕ್ಷಿತಾರಣ್ಯದ ಪ್ರಾಣಿಗಳು ಮತ್ತು ಸಸ್ಯ ಸಂಪತ್ತು ರಕ್ಷಣೆಗೆ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಂಡಿದ್ದೆವು. ಆದರೆ ವರುಣದೇವ ಕೃಪೆ ತೋರಿ ನಮ್ಮ ಆತಂಕವನ್ನು ದೂರ ಮಾಡಿದ್ದಾನೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
ಕಾರ್ಯಾಚರಣೆ ವೇಳೆ ನಾಲ್ಕು ಸಿಬ್ಬಂದಿ ಸಾವು
ಇನ್ನು ಕಾಡ್ಗಿಚ್ಚು ಶಮನಕ್ಕೆ 11,600 ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಕಾಡಿನ ಬೆಂಕಿ ಶಮನಕ್ಕೆ ಅಹರ್ನಿಷಿ ಯತ್ನ ಮಾಡುತ್ತಿದ್ದ ಸಿಬ್ಬಂದಿಗಳ ಪೈಕಿ ನಾಲ್ವರು ಮೃತಪಟ್ಟಿದ್ದಾರೆ. ಇದಲ್ಲದೆ ಕಾರ್ಯಾಚರಣೆ ವೇಳೆ ವಿವಿಧ ಸಂದರ್ಭದಲ್ಲಿ ಸುಮಾರು 14ಕ್ಕೂ ಹೆಚ್ಚುಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಇದೀಗ ಭಾರಿ ಮಳೆ ಸುರಿದ ಪರಿಣಾಮ ತುರ್ತು ಕಾರ್ಯಾಚರಣೆ ಸಿಬ್ಬಂದಿಗೆ ನೆಮ್ಮದಿ ದೊರೆತಂತಾಗಿದೆ.