ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿ ಯಶಸ್ವಿಯಾಗಿರುವ ಸಮ-ಬೆಸ ಸಂಖ್ಯೆ ವಾಹನ ಸಂಚಾರ ನಿಯಮವನ್ನು ವಿಫಲಗೊಳಿಸಲು ದೆಹಲಿಯ ವಿರೋಧಪಕ್ಷ ಯತ್ನಿಸಿತ್ತು ಎಂದು ಆರೋಪಿಸಿದ್ದಾರೆ.
ಪ್ರಪಂಚದಾದ್ಯಂತ ಸಮ-ಬೆಸ ವಾಹನ ಸಂಚಾರ ನಿಯಮಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು, ಸಂಚಾರ ನಿಯಮ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅನೇಕ ನಿಯತಕಾಲಿಕೆಗಳು ಲೇಖನ ಪ್ರಕಟಿಸಿದ್ದವು ಆದರೆ ದೆಹಲಿಯ ವಿಪಕ್ಷ ಈ ಯೋಜನೆಯನ್ನು ವಿಫಲಗೊಳಿಸಲು ಯತ್ನಿಸಿದ್ದವು ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ವಾಹನ ಸಂಚಾರ ನಿಯಮ ಯಶಸ್ವಿಯಾಗಿದ್ದಕ್ಕೆ ವಿಪಕ್ಷಗಳಲ್ಲಿ ಆತಂಕ ಉಂಟಾಗಿತ್ತು. ಕೆಲವೊಬ್ಬರು ಪ್ರಪಂಚದಾದ್ಯಂತ ಸಂಚಾರ ಮಾಡಿದರೂ ಅವರ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿಲ್ಲ. ಆದರೆ ಆಮ್ ಆದ್ಮಿ ಪಕ್ಷ ಯಾವುದೇ ಪ್ರದೇಶಕ್ಕೆ ಹೋಗದೇ ವಿಶ್ವಾದ್ಯಂತ ಮನ್ನಣೆ ಗಳಿಸಿದೆ ಎಂದು ಕೇಜ್ರಿವಾಲ್ ಮೋದಿಯ ಹೆಸರು ಹೇಳದೇ ಪರೋಕ್ಷವಾಗಿ ಟೀಕಿಸಿದ್ದಾರೆ.
ಆಮ್ ಆದ್ಮಿ ಪಕ್ಷ ಬೇರೆ ದೇಶಗಳಿಗೆ ಹೋಗದೇ ಮೆಚ್ಚುಗೆ ವ್ಯಕ್ತವಾಗಿರುವುದು ವಿರೋಧಪಕ್ಷಗಳಿಗೆ ಸಹಿಸಲು ಆಗುತ್ತಿಲ್ಲ. ಆದ್ದರಿಂದ ಸಮ-ಬೆಸ ವಾಹನ ಸಂಚಾರ ನಿಯಮವನ್ನು ವಿಫಲಗೊಳಿಸಲು ಯತ್ನಿಸಿದ್ದರು ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.