ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಕಾಂಗ್ರೆಸ್ ನ ಉನ್ನತ ನಾಯಕರು ಜೈಲಿಗೆ ಹೋಗುವುದು ಗ್ಯಾರಂಟಿ ಎಂದು ಬಿಜೆಪಿ ಸಂಸದ ಸುಬ್ರಮಣ್ಯಯನ್ ಸ್ವಾಮಿ ಅವರು ಗುರುವಾರ ಹೇಳಿದ್ದಾರೆ.
"ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರು 3,600 ಕೋಟಿ ರುಪಾಯಿಗಳ ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣದಲ್ಲಿ ತಮ್ಮ ವಿರುದ್ಧ ಆರೋಪ ಸಾಬೀತಾದರೆ ತಾನು ರಾಜಕೀಯ ತೊರೆಯುವುದಾಗಿ ಹೇಳಿದ್ದಾರೆ. ಆದರೆ ಅವರು ಹಾಗೆ ಹೇಳುವ ಅಗತ್ಯವೇ ಇಲ್ಲ. ಏಕೆಂದರೆ ಅವರ ವಿರುದ್ಧದ ಆರೋಪ ಸಾಬೀತಾದಾಗ ಅವರು ನೇರವಾಗಿ ಜೈಲಿಗೇ ಹೋಗುತ್ತಾರೆ ಮತ್ತು ಅದುವೇ ಅವರ ರಾಜಕೀಯ ಸನ್ಯಾಸಕ್ಕೆ ಕಾರಣವಾಗುತ್ತದೆ' ಎಂದು ಸುಬ್ರಮಣ್ಯಯನ್ ಸ್ವಾಮಿ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಅಗಸ್ಟಾ ಹಗರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ನಡೆಯಬೇಕೆಂಬ ವಿರೋಧ ಪಕ್ಷಗಳ ಬೇಡಿಕೆಯನ್ನು ವಿರೋಧಿಸಿದ ಸುಬ್ರಮಣ್ಯಯನ್ ಸ್ವಾಮಿ, ಈ ಹಿಂದೆ ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರ ತಾನು ಅಧಿಕಾರದಲ್ಲಿದ್ದಾಗ ಯಾಕೆ ಆ ರೀತಿಯ ತನಿಖೆ ನಡೆಸಲಿಲ್ಲ ಎಂದು ಪ್ರಶ್ನಿಸಿದರು.
ಇನ್ನು ರಾಜ್ಯಸಭೆಯಲ್ಲಿನ ತಮ್ಮ ಭಾಷಣದ ಬಗ್ಗೆ ಪ್ರತಿಕ್ರಿಯಿಸಿದ ಸ್ವಾಮಿ, ಅಗಸ್ಟಾ ಹಗರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಸರನ್ನು ಕಟ್ಟಕಡೆಯಲ್ಲಿ ಹೇಳುವುದು ನಮ್ಮ ತಂತ್ರಗಾರಿಕೆಯ ಒಂದು ಭಾಗವೇ ಆಗಿತ್ತು; ಏಕೆಂದರೆ ಆ ಸನ್ನಿವೇಶದಲ್ಲಿ ಕಾಂಗ್ರೆಸಿಗರು ಸದನದಲ್ಲಿ ದೊಡ್ಡ ಗದ್ದಲ, ಗಲಭೆ, ಗಲಾಟೆ ಎಬ್ಬಿಸದಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶವಾಗಿತ್ತು ಎಂದರು.