ಹೊಸೂರು: ಅಗಸ್ಟಾವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ಭಾಗಿಯಾದವರಿಗೆ ಖಂಡಿತವಾಗಿ ಶಿಕ್ಷೆಯಾಗಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಆ ಮೂಲಕ ವಿರೋಧ ಪಕ್ಷ ಕಾಂಗ್ರೆಸ್ ಹಾಗೂ ಅದರ ಉನ್ನತ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಮತ್ತೆ ಸಮರ ಸಾರಿದ್ದಾರೆ.
ಇಟಲಿಯ ಜನರೇ ಅವರನ್ನು ಅಪರಾಧಿಗಳೆಂದು ಗುರುತಿಸಿದ್ದಾರೆ. ಅಂದ ಮೇಲೆ ನಾವೇನು ಮಾಡಲು ಸಾಧ್ಯ? ನಾನು ಇಟಲಿಗೆ ಹೋಗಿರಲಿಲ್ಲ, ನನಗೆ ಅಲ್ಲಿ ಯಾರನ್ನೂ ಗೊತ್ತಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ಹೆಲಿಕಾಪ್ಟರ್ ಹಗರಣದಲ್ಲಿ ತಮ್ಮ ಮತ್ತು ತಮ್ಮ ಸರ್ಕಾರದ ಸದಸ್ಯರ ಪಾತ್ರವಿಲ್ಲ ಎಂದು ಹೇಳಲು ಹೊರಟಿದ್ದಾರೆ.
ಅವರು ಇಂದು ತಮಿಳುನಾಡಿನ ಹೊಸೂರಿನಲ್ಲಿ ರಾಜ್ಯ ವಿಧಾನ ಸಭಾ ಚುನಾವಣೆ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು.
ಆಗಸ್ಟಾ ಕಂಪೆನಿಯ ಮಾತೃ ಕಂಪೆನಿಯಾದ ಫಿನ್ಮೆಕಾನಿಕಾದ ಉನ್ನತ ಅಧಿಕಾರಿಗಳು ಭಾರತೀಯರಿಗೆ 2010ರಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ 3,600 ಕೋಟಿ ರೂಪಾಯಿ ಲಂಚ ನೀಡಿದ್ದಾರೆ ಎಂದು ಇಟಲಿಯ ಮಿಲನ್ ಕೋರ್ಟ್ ಹೇಳಿದೆ. ಮಧ್ಯವರ್ತಿಗಳಿಂದ ಮತ್ತು ಆಡಳಿತಾಧಿಕಾರಿಗಳಿಂದ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಹಾಗೂ ಅವರ ಉನ್ನತ ಸಲಹೆಗಾರರಿಗೆ ವರ್ಗಾವಣೆಗೊಂಡ ಪತ್ರಗಳನ್ನು ಪರಿಗಣನೆಗೆ ತೆಗೆದುಕೊಂಡು ಇಟಲಿಯ ನ್ಯಾಯಾಲಯ ತೀರ್ಪು ಕೊಟ್ಟಿದೆ ಎಂದು ಪ್ರಧಾನಿ ಹೇಳಿದರು.
ಈ ಮಧ್ಯೆ ಲಂಡನ್ ಮೂಲದ ಮಹಿಳೆಯೊಬ್ಬರು ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ಬಹುಕೋಟಿ ಹೆಲಿಕಾಪ್ಟರ್ ಹಗರಣದಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆಂದು ನಂಬಲಾಗಿದ್ದು, ಜಾರಿ ನಿರ್ದೇಶನಾಲಯ ಆ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದೆ.
ಲಂಡನ್ ನಲ್ಲಿರುವ ಡಚ್ ಮಹಿಳೆ ಕ್ರಿಸ್ಟಿನ್ ಬ್ರೆಡೋ ಸ್ಲ್ಪಿಡ್, ಆಗಸ್ಟಾಲ್ಯಾಂಡ್ ಹೆಲಿಕಾಪ್ಟರ್ ಒಪ್ಪಂದ ಅಂತಿಮ ಘಟ್ಟ ತಲುಪುವ ಸಂದರ್ಭದಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು ಎಂದು ಹೇಳಲಾಗುತ್ತಿದೆ. ಆಕೆ ಈಗ ಲಂಡನ್ ನ 10 ಚಪ್ಯ್ಟೋ ರಸ್ತೆಯಲ್ಲಿ ವಾಸಿಸುತ್ತಿದ್ದಾರೆ ಎಂದು ದಾಖಲೆ ಹೇಳುತ್ತದೆ. ಹಗರಣ ಕುರಿತು ಇಟಲಿ ನ್ಯಾಯಾಲಯ ತೀರ್ಪು ನೀಡಿದ ಮಾರ್ಚ್ ತಿಂಗಳಿನಿಂದ ಸ್ಲ್ಪಿಡ್ ಕಣ್ಮರೆಯಾಗಿದ್ದಾರೆ.