ನವದೆಹಲಿ: ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಜೆಎನ್‌ಯು ವಿದ್ಯಾರ್ಥಿ ಸಂಘಟನೆಗಳ ಅಧ್ಯಕ್ಷ ಕನಯ್ಯಾ ಕುಮಾರ್ ಶುಕ್ರವಾರ ತಮ್ಮ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದಾರೆ. 9 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿ ಅಸ್ವಸ್ಥನಾಗಿದ್ದ ಕನಯ್ಯಾ ಅವರನ್ನು ಎಐಐಎಂಎಸ್ (ಏಮ್ಸ್) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಕನಯ್ಯಾ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಸುದ್ದಿ ಮೂಲಗಳು ವರದಿ ಮಾಡಿವೆ.
ಫೆಬ್ರವರಿ 9 ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಕೆಲವು ವಿದ್ಯಾರ್ಥಿಗಳ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಿರುವುದನ್ನು ವಿರೋಧಿಸಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನಯ್ಯಾ ಕುಮಾರ್ ಮತ್ತು ಇತರ ವಿದ್ಯಾರ್ಥಿಗಳು ಏಪ್ರಿಲ್ 29ರಿಂದ ಅನಿರ್ದಿಷ್ಟಾವಧಿ ಕಾಲದವರಗೆ ಉಪವಾಸ ಸತ್ಯಾಗ್ರ ಕೈಗೊಂಡಿದ್ದರು. ಈ ಉಪವಾಸ ಸತ್ಯಾಗ್ರಹದಲ್ಲಿ ಐವರು ವಿದ್ಯಾರ್ಥಿಗಳು ಈಗಾಗಲೇ ನಿರಶನ ಅಂತ್ಯಗೊಳಿಸಿದ್ದು, 15 ಮಂದಿ ಇನ್ನೂ ನಿರಶನ ಮುಂದುವರಿಸಿದ್ದಾರೆ.
ದೇಶದ್ರೋಹ ಆರೋಪದಲ್ಲಿ ಬಂಧಿತನಾಗಿದ್ದ ಕನಯ್ಯಾ ಜಾಮೀನು ಮೂಲಕ ಬಂಧಮುಕ್ತನಾಗಿದ್ದಾನೆ. ಉಪವಾಸ ಸತ್ಯಾಗ್ರಹ ನಿರತ ಕನಯ್ಯಾನನ್ನು ಅರೆಪ್ರಜ್ಞಾವಸ್ಥೆಯಲ್ಲಿ ಶುಕ್ರವಾರ ಏಮ್ಸ್ ಗೆ ದಾಖಲಿಸಲಾಗಿತ್ತು.
ನಿರ್ಜಲೀಕರಣದಿಂದ ಬಳಲುತ್ತಿದ್ದ ಕನಯ್ಯಾನಿಗೆ ಸೂಕ್ತ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಲಾಗಿದೆ. ಆತನ ಆರೋಗ್ಯ ಸ್ಥಿತಿ ಹದಗೆಟ್ಟಿರುವ ಕಾರಣ ಆತ ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದಾನೆ. ಆದರೆ ಹೋರಾಟ ಮುಂದುವರಿಯಲಿದೆ ಎಂದು ಜೆಎನ್‌ಯುಎಸ್‌ಯು ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.