ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ( ಡಬ್ಲ್ಯೂ ಹೆಚ್ ಒ) ನಗರ ವಾತಾವರಣ ಗುಣಮಟ್ಟ ಡೇಟಾಬೇಸ್ ನ್ನು ಮೇ.12 ರಂದು ಬಿಡುಗಡೆ ಮಾಡಿದ್ದು, ದೆಹಲಿ ವಿಶ್ವದ ಅತ್ಯಂತ ಮಲಿನ ನಗರಗಳ ಪಟ್ಟಿಯಿಂದ ಮುಕ್ತಿ ಪಡೆದಿದೆ.
ಡೇಟಾ ಬೇಸ್ ಮಾಹಿತಿ ಪ್ರಕಾರ ಪಿಎಂ 2.5 ( ಸೂಕ್ಷ್ಮ ಕಣಗಳ ಮಾಲಿನ್ಯ) ಹೊಂದಿರುವ 103 ದೇಶಗಳ 3,000 ನಗರಗಳ ಪೈಕಿ ದೆಹಲಿ 11 ನೇ ಸ್ಥಾನ ಪಡೆದಿದೆ. ಇನ್ನು ಪಿಎಂ 10 ಮಟ್ಟದ ಮಾಲಿನ್ಯ ಹೊಂದಿರುವ ನಗರಗಳ ಪೈಕಿ ದೆಹಲಿ 25 ನೇ ಸ್ಥಾನ ಪಡೆದಿದೆ. ದೆಹಲಿಯ ಮಾಲಿನ್ಯ ಪ್ರಮಾಣದ ವಿಷಯದಲ್ಲಿ 2014 ರ ನಂತರ ಇದು ಗಣನೀಯವಾದ ಸುಧಾರಣೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ಪಿಎಂ 2 .5 ಮಟ್ಟದ ಮಾಲಿನ್ಯ ಹೊಂದಿದ್ದ ನಗರಗಳ ಪೈಕಿ ದೆಹಲಿ ಅತ್ಯಂತ ಹೆಚ್ಚು ವಾಯುಮಾಲಿನ್ಯ ಹೊಂದಿದ್ದ ನಗರಗಳ ಪಟ್ಟಿಯಲ್ಲಿತ್ತು.
ಪ್ರಸ್ತುತ ಬಿಡುಗಡೆಯಾಗಿರುವ ಅಂಕಿ-ಅಂಶಗಳ ಪ್ರಕಾರ ಇರಾನ್ ನ ಝಬೊಲ್ ನಗರ ವಿಶ್ವದಲ್ಲಿ ಅತ್ಯಂತ ಹೆಚ್ಚು ಮಾಲಿನ್ಯ ಹೊಂದಿರುವ ನಗರವಾಗಿದ್ದು ಪಿಎಂ 2 .5 ಮಟ್ಟದ ನಗರಗಳಲ್ಲಿ ಗ್ವಾಲಿಯರ್ ಹಾಗೂ ಅಲಹಾಬಾದ್ ಅನುಕ್ರಮವಾಗಿ ಎರಡನೇ ಹಾಗೂ ಮೂರನೇ ನಗರಗಳಾಗುವ ಸನಿಹದಲ್ಲಿವೆ. 6 ಹಾಗೂ 7 ನೇ ಸ್ಥಾನದಲ್ಲಿ ಪಾಟ್ನಾ ಹಾಗೂ ರಾಯ್ ಪುರ ಇದ್ದರೆ, ವಿಶ್ವದ 10 ಅತಿ ಹೆಚ್ಚು ಮಲಿನಕ್ಕೊಳಗಾದ ನಗರಗಳ ಪಟ್ಟಿಯಲ್ಲಿ ಭಾರತದ 4 ನಗರಗಳಿದ್ದು, ಟಾಪ್ 20 ನಗರಳ ಪೈಕಿ ಭಾರತದ 10 ನಗರಗಳಿವೆ.