ನವದೆಹಲಿ: ಕೇಂದ್ರ ಸರ್ಕಾರದ ಒತ್ತಡದ ಹಿನ್ನೆಲೆಯಲ್ಲಿ ದೆಹಲಿ ವಿಶ್ವವಿದ್ಯಾಲಯ ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಪ್ರಮಾಣ ಅಸಲಿ ಎಂದು ಹೇಳುತ್ತಿದೆ ಎಂದಿದ್ದ ಆಮ್ ಆದ್ಮಿ ಪಕ್ಷದ ಆರೋಪವನ್ನು ತಳ್ಳಿಹಾಕಿರುವ ವಿವಿ, ನಮ್ಮ ಮೇಲೆ ಯಾವುದೇ ರಾಜಕೀಯ ಒತ್ತಡವಿಲ್ಲ. ಕಾನೂನಿನಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಗುರುವಾರ ಸ್ಪಷ್ಟಪಡಿಸಿದೆ.
ಮೋದಿ ಅವರ ಬಿಎ ಪದವಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ಕೆಲವು ಆಪ್ ನಾಯಕರು ದೆಹಲಿ ವಿವಿ ಕುಲಪತಿ ಯೋಗೇಶ್ ತ್ಯಾಗಿ ಅವರನ್ನು ಭೇಟಿ ಮಾಡಿದ್ದರು. ಅಲ್ಲದೆ ಕುಲಪತಿ ಭೇಟಿ ಬಳಿಕ ದೆಹಲಿ ವಿವಿ ಮೇಲೆ ರಾಜಕೀಯ ಒತ್ತಡವಿದೆ. ಹೀಗಾಗಿ ಪದವಿ ಪ್ರಮಾಣ ಪತ್ರ ಪರಿಶೀಲಿಸಬೇಕು ಎಂಬ ತಮ್ಮ ಬೇಡಿಕೆಯನ್ನು ನಿರಾಕರಿಸುತ್ತಿದೆ ಎಂದು ಆರೋಪಿಸಿದ್ದರು,
ದೆಹಲಿ ವಿವಿಯ ಆರ್ ಟಿಐ ಘಟಕ ಕಾನೂನು ಪ್ರಕಾರ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ ಒತ್ತಡಕ್ಕೆ ಒಳಗಾಗಿದೆ ಎಂದು ಹೇಳುವುದು ತಪ್ಪಾಗುತ್ತದೆ ಎಂದು ದೆಹಲಿ ವಿವಿ ಕುಲಸಚಿವ ತರುಣ್ ದಾಸ್ ಅವರು ತಿಳಿಸಿದ್ದಾರೆ.
ಪ್ರಧಾನಿ ಪದವಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲೆ ಆಪ್ ನಾಯಕರು ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದು, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮೋದಿ ಪದವಿ ಪ್ರಮಾಣ ಪತ್ರಗಳನ್ನು ಬಿಡುಗಡೆ ಮಾಡಿದ ನಂತರವೂ ದೆಹಲಿ ವಿವಿ ಕುಲಪತಿಗಳು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸಲು ನಿರಾಕರಿಸುತ್ತಿರುವುದು ಅಚ್ಚರಿ ಮೂಡಿಸಿದೆ ಎಂದಿದ್ದಾರೆ.