ಪಾಟ್ನಾ: ಕಾರು ಓವರ್ಟೇಕ್ ಮಾಡಿದ್ದಕ್ಕೆ ಯುವಕನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡ ಜೆಡಿಯು ಎಂಎಲ್ ಸಿ ಮನೋರಮಾ ದೇವಿಗೆ ಶನಿವಾರ ಗಯಾ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಹತ್ಯೆ ಪ್ರಕರಣ ಸಂಬಂಧ ಮೇ 20ರಂದು ವಿಚಾರಣೆಗೆ ಹಾಜರಾಗುವಂತೆ ಮೋನರಮಾ ದೇವಿ ಹಾಗೂ ಆಕೆಯ ವಕೀಲರಿಗೆ ನೋಟಿಸ್ ನೀಡಿರುವ ಕೋರ್ಟ್, ಒಂದು ವೇಳೆ ವಿಚಾರಣೆಗೆ ಹಾಜರಾಗದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಬಿಹಾರ ವಿಧಾನ ಪರಿಷತ್ ಸದಸ್ಯೆ ಮನೋರಮಾ ದೇವಿ ಅವರ ಪುತ್ರ ರಾಕಿ ಯಾದವ್ ಅವರನ್ನು ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಪುತ್ರನ ಬಂಧನದ ನಂತರ ಮನೋರಮಾ ತಲೆಮರೆಸಿಕೊಂಡಿದ್ದಾರೆ. ಮನೋರಮಾ ದೇವಿ ಅಕ್ರಮ ಮದ್ಯ ತಯಾರಿಸಿದ ಆರೋಪ ಎದಿರುಸುತ್ತಿದ್ದಾರೆ.
ವ್ಯಾಪಾರಿಯೊಬ್ಬರ ಪುತ್ರ ಆದಿತ್ಯ ಸಚ್ದೇವ್ ಹಾಗೂ ಸ್ನೆಹಿತರನ್ನು ಒಳಗೊಂಡ ಸ್ವಿಪ್ಟ್ ಕಾರು ಶಾಸಕಿಯ ಪುತ್ರ ರಾಕಿಯ ಎಸ್ಯುವಿ ಕಾರನ್ನು ಓವರ್ ಟೇಕ್ ಮಾಡಿದ ಹಿನ್ನೆಲೆಯಲ್ಲಿ ಉಭಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಆವೇಶಕ್ಕೆ ಒಳಗಾದ ರಾಕಿ ತನ್ನ ಬಳಿ ಇದ್ದ ಪಿಸ್ತೂಲಿನಿಂದ ಆದಿತ್ಯಾಗೆ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.