ಶ್ರೀನಗರ: ಇತ್ತೀಚೆಗೆ ಜಮ್ಮು ಕಾಶ್ಮೀರದ ಬಾರಮುಲ್ಲಾ ಪ್ರದೇಶದಲ್ಲಿ ಬಂಧಿತನಾದ ಪಾಕ್ ಆಕ್ರಮಿತ ಕಾಶ್ಮೀರದ ಜೈಷೆ ಮುಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್‌ಗೂ ಆಧಾರ್ ಕಾರ್ಡ್ ಇರುವುದಾಗಿ ಪೊಲೀಸರು ಹೇಳಿದ್ದಾರೆ.
ಅಬ್ದುಲ್ ರೆಹ್ಮಾನ್ ಎಂಬ ಈ ಉಗ್ರನನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಶುಕ್ರವಾರ ಬಂಧಿಸಿದ್ದರು. ಈತನನ್ನು ವಿಚಾರಣೆಗೊಳಪಡಿಸಿದಾಗ ಈತ ಆಧಾರ್ ಕಾರ್ಡ್ ಹೊಂದಿರುವುದು ತಿಳಿದು ಬಂದಿದೆ.
ಪೊಲೀಸರ ಪ್ರಕಾರ ಈ ಉಗ್ರ ಪಾಕ್ ಮೂಲದ ಜೈಷೆ ಮೊಹಮ್ಮದ್ ಸಂಘಟನೆಗೆ ಸೇರಿದವನಾಗಿದ್ದು, ಪಠಾಣ್‌ಕೋಟ್ ದಾಳಿಯಲ್ಲಿಯೂ ಭಾಗಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.
ಮುಜಾಫರಾಬಾದ್ ನಿವಾಸಿಯಾಗಿರುವ ರೆಹ್ಮಾನ್, ಕಳೆದ ಫೆಬ್ರವರಿ ತಿಂಗಳಲ್ಲಿ ಜೈಷೆ ಸಂಘಟನೆಯ 6 ಸದಸ್ಯರೊಂದಿಗೆ ಕಾಶ್ಮೀರಕ್ಕೆ ಬಂದಿದ್ದನು. ಆಧಾರ್ ಕಾರ್ಡ್‌ನಲ್ಲಿ ಈತನ ಹೆಸರು ಶಬೀರ್ ಅಹ್ಮದ್ ಖಾನ್ ಎಂದಿದ್ದು ಅಪ್ಪನ ಹೆಸರು ಗುಲಾಂ ರಸೂಲ್ ಖಾನ್ ಎಂದಿದೆ.
ಆದಾಗ್ಯೂ, ಈ ಆಧಾರ್‌ಕಾರ್ಡ್‌ನ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಈತ ಆಧಾರ್‌ಕಾರ್ಡ್‌ನ್ನು ತಿದ್ದಿ ಅಥವಾ ನಕಲು ಮಾಡಿಕೊಂಡಿರುವುದೇ? ಎಂಬುದರ ಬಗ್ಗೆಯೂ ಸಂಶಯವಿದೆ.
ಒಂದು ವೇಳೆ ಈ ಆಧಾರ್ ಕಾರ್ಡ್ ನಿಜವಾದ ಕಾರ್ಡ್ ಆಗಿದ್ದರೆ, ಈತನಿಗೆ ಅದ್ಹೇಗೆ ಆಧಾರ್ ಕಾರ್ಡ್ ನೀಡಲಾಯಿತು? ಎಂಬುದು ದೊಡ್ಡ ಪ್ರಶ್ನೆಯಾಗಿದೆ.