ಗುವಾಹಟಿ: ಐದು ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಸ್ಪಷ್ಟ ಚಿತ್ರಣ ಪಡೆಯುತ್ತಿದ್ದು, ಅಸ್ಸಾಂ ನಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ನಿಚ್ಚಳವಾಗಿದೆ.
ಒಟ್ಟು 126 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 81 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು ಆಡಳಿತಾರೂಢ ಕಾಂಗ್ರೆಸ್ ಕೇವಲ 19 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈ ಮೂಲಕ ಬಿಜೆಪಿ ಮೊದಲ ಬಾರಿಗೆ ಅಸ್ಸಾಂ ನಲ್ಲಿ ಸರ್ಕಾರ ರಚಿಸುವ ಸಾಧ್ಯತೆ ನಿಚ್ಚಳವಾಗಿದೆ.
ಅಸ್ಸಾಂ ನಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ಈಶಾನ್ಯ ರಾಜ್ಯಗಳಲ್ಲಿ ಮೊದಲ ಬಿಜೆಪಿ ಸರ್ಕಾರ ಇದಾಗಲಿದೆ. ವಿಧಾನಸಭಾ ಚುನಾವಣೆ ನಡೆಯುವುದಕ್ಕೂ ಮುನ್ನವೇ ತರುಣ್ ಗೊಗೊಯ್ ನೇತೃತ್ವದ ಸರ್ಕಾರದಲ್ಲಿ ಭಿನ್ನಮತ ಕಾಣಿಸಿಕೊಂಡು ಅಸ್ಸಾಂ ನಲ್ಲಿ ಆಡಳಿತ ವಿರೋಧಿ ಅಲೆಗೆ ದಾರಿ ಮಾಡಿಕೊಟ್ಟಿತ್ತು.
ಅಸ್ಸಾಂ ಮುಖ್ಯಮಂತ್ರಿ ಬದಲಾವಣೆಗೆ ಕಾಂಗ್ರೆಸ್ ಹೈ ಕಮಾಂಡ್ ಗೆ ಒತ್ತಡ ಹೇರಿದ್ದ, ಹಿಂಮಂತ್ ಬಿಸ್ವಾ ಶರ್ಮಾ, ತಮ್ಮ ಬೇಡಿಕೆ ಈಡೇರದ ಕಾರಣ, ಬಿಜೆಪಿಗೆ ಪಕ್ಷಾಂತರಗೊಂಡಿದ್ದರು ಹಿಮಂತ್ ಬಿಸ್ವಾ ಶರ್ಮಾ ಅವರೊಂದಿಗೆ ಹಲವು ಕಾಂಗ್ರೆಸ್ ನಾಯಕರೂ ಸಹ ಬಿಜೆಪಿಗೆ ಸೇರ್ಪಡೆಗೊಂದಿದ್ದರು. ಈ ಬೆಳವಣಿಗೆ ಅಸ್ಸಾಂ ನಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನೆರವಾಗಿದೆ ಎಂದು ವಿಶ್ಲೇಷಿಸಲಾಗಿದೆ.