ಬೆಂಗಳೂರು: ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಪಕ್ಷದ ಕಳಪೆ ಸಾಧನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸೋಲಿಗೆ ಕಾರಣವಾದ ಅಂಶ, ಕೊರತೆಗಳನ್ನು ಗುರುತಿಸಿ ಪಕ್ಷಕ್ಕೆ ಅಗತ್ಯವಿರುವ ದುರಸ್ತಿ ಕಾರ್ಯ ಮಾಡುತ್ತೇವೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿನಿಂದಾಗಿ ಐದು ರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಗೆ ಸೋಲುಂಟಾಗಿಲ್ಲ ಎಂದಿರುವ ಮಲ್ಲಿಕಾರ್ಜುನ ಖರ್ಗೆ, ಎಲ್ಲಾ ಸೋಲುಗಳಿಗೂ ರಾಹುಲ್ ಗಾಂಧಿ ಅವರನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಂಚರಾಜ್ಯಗಳ ಚುನಾವಣಾ ಫಲಿತಾಂಶ ರಾಜ್ಯ ಕಾಂಗ್ರೆಸ್ ಮೇಲೂ ಪರಿಣಾಮ ಬೀರುವುದರ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ರಾಜ್ಯದಲ್ಲೂ ಅಗತ್ಯ ದುರಸ್ತಿ ಮಾಡಲಾಗುವುದು, ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ಹೇಳಿದ್ದಾರೆ. ಈ ಮೂಲಕ ಖರ್ಗೆ ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಕುರಿತು ಸೂಚನೆ ನೀಡಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.