ಬಿಜೆಪಿ ಸಚಿವ ಖಾಡ್ಸೆಗೆ ದಾವೂದ್ ನಿಂದ ಅತಿ ಹೆಚ್ಚು ಕರೆ, ತನಿಖೆಗೆ ಮಹಾ ಸರ್ಕಾರ ಆದೇಶ
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕ್ ನಿಂದ ಅತೀ ಹೆಚ್ಚು ಬಾರಿ ಕರೆ ಮಾಡಿದ್ದು ಮಹಾರಾಷ್ಟ್ರದ ಬಿಜೆಪಿ ಮುಖಂಡ, ಕಂದಾಯ ಸಚಿವ ಏಕನಾಥ್ ಖಾಡ್ಸೆ...
ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕ್ ನಿಂದ ಅತೀ ಹೆಚ್ಚು ಬಾರಿ ಕರೆ ಮಾಡಿದ್ದು ಮಹಾರಾಷ್ಟ್ರದ ಬಿಜೆಪಿ ಮುಖಂಡ, ಕಂದಾಯ ಸಚಿವ ಏಕನಾಥ್ ಖಾಡ್ಸೆ ಅವರಿಗೆ ಎಂದು ಮಾಧ್ಯಮದ ವರದಿ ತಿಳಿಸಿದ್ದು, ಈ ಕುರಿತು ಮಹಾರಾಷ್ಟ್ರ ಸರ್ಕಾರ ಶನಿವಾರ ತನಿಖೆಗೆ ಆದೇಶ ನೀಡಿದೆ.
ವಡೋದರಾ ಮೂಲದ ಹ್ಯಾಕರ್ ಮನೀಶ್ ಭಾಂಗಾಲೆ ಸಂಗ್ರಹಿಸಿದ್ದ ಮಾಹಿತಿಯನ್ನು ಇಂಡಿಯಾ ಟುಡೇ ಪ್ರಸಾರ ಮಾಡಿತ್ತು. ಭೂಗತ ಪಾತಕಿ ಯಾವೆಲ್ಲ ಮೊಬೈಲ್ ನಂಬರ್ ಗಳಿಂದ ಭಾರತಕ್ಕೆ ಕರೆ ಮಾಡಿದ್ದ ಎಂಬುದರ ವರದಿ ಪ್ರಸಾರವಾಗಿತ್ತು. ಆದರೆ ಯಾರ ಹೆಸರು ಬಹಿರಂಗವಾಗಿರಲಿಲ್ಲವಾಗಿತ್ತು.
ಭಾಂಗಾಲೆ ದಾವೂದ್ ಪತ್ನಿ ಮೆಹಜಬೀನ್ ಶೇಕ್ ಹೆಸರಿನಲ್ಲಿ ರಿಜಿಸ್ಟರ್ಡ್ ಆಗಿದ್ದ 4 ಫೋನ್ ಗಳ ವಿವರಗಳನ್ನು ಹ್ಯಾಕ್ ಮಾಡಿ ಸಂಗ್ರಹಿಸಿದ್ದರು. ಇದರಲ್ಲಿ ಅತೀ ಹೆಚ್ಚು ಬಾರಿ ಬಿಜೆಪಿ ಮುಖಂಡ ಖಾಡ್ಸೆಗೆ ಕರೆ ಮಾಡಿರುವುದಾಗಿ ವರದಿ ವಿವರಿಸಿದೆ.
ಆದರೆ ಬಿಜೆಪಿ ಮುಖಂಡ ಖಾಡ್ಸೆ ಅವರು ಈ ಆರೋಪವನ್ನು ತಳ್ಳಿಹಾಕಿದ್ದಾರೆ. ನಾನಾಗಲಿ, ನನ್ನ ಕುಟುಂಬದ ಸದಸ್ಯರು ಈವರೆಗೂ ದಾವೂದ್ ಇಬ್ರಾಹಿಂ ಜೊತೆ ಮಾತನಾಡಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.