ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ (ಕೃಪೆ: ಎಎನ್ ಐ)
ನವದೆಹಲಿ: ಕೇರಳದಲ್ಲಿ ಎಲ್‌ಡಿಎಫ್ ಸರ್ಕಾರ ಅಧಿಕಾರಕ್ಕೇರಿದ ವಿಜಯೋತ್ಸವ ಆಚರಿಸುತ್ತಿದ್ದ ವೇಳೆ ಬಿಜೆಪಿ- ಸಿಪಿಐ (ಎಂ) ನಡುವಿನ ಘರ್ಷಣೆಯಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆಯಾಗಿತ್ತು. ಈ ಕೃತ್ಯವನ್ನು ಖಂಡಿಸಿ ಬಿಜೆಪಿ, ಸಿಪಿಎಂ ಕೇಂದ್ರ ಕಚೇರಿಯಾದ ಎಕೆಜಿ ಭವನಕ್ಕೆ ಭಾನುವಾರ ಪ್ರತಿಭಟನಾ ರ್ಯಾಲಿ ನಡೆಸಿದ್ದು, ರ್ಯಾಲಿಯಲ್ಲಿ ಸಂಘರ್ಷವೇರ್ಪಟ್ಟಿರುವ ಬಗ್ಗೆ ವರದಿಯಾಗಿದೆ.
ಎಕೆಜೆ ಭವನದ ಮುಂದೆ ಪೊಲೀಸರು ಸ್ಥಾಪಿಸಿದ್ದ ಎರಡು ಬ್ಯಾರಿಕೇಡ್‌ಗಳನ್ನು ದಾಟಿ ಬಿಜೆಪಿ ಕಾರ್ಯಕರ್ತರು ಮುಂದೆ ಬಂದು ಎಕೆಜಿ ಭವನದ ಬೋರ್ಡ್‌ನ್ನು ಪುಡಿ ಮಾಡಿದ್ದಾರೆ. ರ್ಯಾಲಿ ರೋಷಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಜಲಫಿರಂಗಿ ಬಳಸಿದ್ದು, ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.
ಕೇರಳದಲ್ಲಿ ಜಂಗಲ್ ರಾಜ್ ನಡೆಯುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಈ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದ್ದರು. ಪ್ರಸ್ತುತ ರ್ಯಾಲಿಯಲ್ಲಿ ಕೇರಳದ ಬಿಜೆಪಿ ರಾಜ್ಯ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಭಾಗವಹಿಸುತ್ತಾರೆ ಎಂದು ಹೇಳಲಾಗಿದ್ದರೂ, ರ್ಯಾಲಿಯ ವೇಳೆ ಕುಮ್ಮನಂ ಅಲ್ಲಿಗೆ ತಲುಪಲಿಲ್ಲ.
ಆದಾಗ್ಯೂ, ದೆಹಲಿಗೆ ಹೋಗಿ ಕುಮ್ಮನಂ ಕೇರಳದಲ್ಲಿನ ಸಂಘರ್ಷದ ಬಗ್ಗೆ ರಾಷ್ಟ್ರಪತಿಯವರಿಗೆ ದೂರು ನೀಡಲಿದ್ದಾರೆ.
ಕೇರಳದಲ್ಲಿ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆ ತ್ರಿಶ್ಶೂರ್ ಕಯಪ್ಪ್‌ಮಂಗಲದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನ ಹತ್ಯೆ ನಡೆದಿತ್ತು. ಈ ಹತ್ಯೆಯನ್ನು ಪ್ರತಿಭಟಿಸಿ ಭಾನುವಾರ ಬಿಜೆಪಿ ರ್ಯಾಲಿ ಕೈಗೊಂಡಿತ್ತು.
ಅದೇ ವೇಳೆ ವಾರದ ಹಿಂದೆ ಕಣ್ಣೂರಿನಲ್ಲಿ ಸಂಭವಿಸಿದ ಘರ್ಷಣೆಯೊಂದರಲ್ಲಿ ಸಿಪಿಎಂನ ಕಾರ್ಯಕರ್ತನೊಬ್ಬ ಹತ್ಯೆಗೀಡಾಗಿದ್ದಾನೆ.