ನವದೆಹಲಿ: ಆಮ್ ಆದ್ಮಿ ಪಕ್ಷ(ಎಎಪಿ) ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮೇ 28ರಂದು ದೆಹಲಿಯಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದೆ.
ವಿದ್ಯುತ್ ಕಡಿತ, ನೀರು ಪೂರೈಕೆಯಲ್ಲಿ ವಿಫಲವನ್ನು ಖಂಡಿಸಿ ಕಾಂಗ್ರೆಸ್ ಬೃಹತ್ ರ್ಯಾಲಿ ಹಮ್ಮಿಕೊಂಡಿದ್ದು, ಕಾಂಗ್ರೆಸ್ ಉಪಾಧ್ಯಕ್ಷ ನೇತೃತ್ವದಲ್ಲಿ ರಾಜ್ ಘಾಟ್ ನಿಂದ ದೆಹಲಿ ಕಾರ್ಯದರ್ಶಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಸಂಜೆ 6.30ಕ್ಕೆ ಟಾರ್ಚ್ ಲೈಟ್ ಮೆರವಣಿಗೆ ನಡೆಸಲಾಗುವುದು ಎಂದು ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಜಯ್ ಮೇಕನ್ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ, ಕಾಂಗ್ರೆಸ್ ನಾಲ್ಕು ದಿನಗಳ ಕಾಲ ಅಂದರೆ ಇಂದಿನಿಂದ ಮೇ 27ರವರೆಗೆ ಜಿಲ್ಲಾ ಮಟ್ಟದ ಸಭೆ ನಡೆಸಲಿದ್ದು, ವಿದ್ಯುತ್ ಮತ್ತು ನೀರಿನ ಕೊರತೆ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.