ಹೈದ್ರಾಬಾದ್: ಚೆಕ್ ಬೌನ್ಸ್ ಪ್ರಕರಣವೊಂದರ ತಪಿತಸ್ರಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ ಶಿಕ್ಷೆ ಜಾರಿಯನ್ನು ನ್ಯಾಯಾಲಯ ಜೂನ್ 6ಕ್ಕೆ ಮುಂದೂಡಿದೆ.
ಉದ್ಯಮಿ ವಿಜಯ್ ಮಲ್ಯ ವಿರುದ್ಧ ಜಿಎಂಆರ್ ಹೈದ್ರಾಬಾದ್ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ ಸಲ್ಲಿಸಿದ್ದ ಚೆಕ್ ಬೌನ್ಸ್ ಪ್ರಕರಣದ ವಿಚಾರಣೆ ನಡೆಸಿದ ಹೈದ್ರಾಬಾದ್ ನ್ಯಾಯಾಲಯವು ಮಲ್ಯರನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿ, ಶಿಕ್ಷೆಯ ಪ್ರಮಾಣ ಆದೇಶವನ್ನು ಕಾಯ್ದಿರಿಸಿತ್ತು. ಆದರೆ, ಮಲ್ಯ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ಶಿಕ್ಷೆಯ ಜಾರಿಯನ್ನು ನ್ಯಾಯಾಲಯ ಮೇ 25ಕ್ಕೆ ಮುಂದೂಡಿತ್ತು.
ಶಿಕ್ಷೆ ಪ್ರಮಾಣವನ್ನು ಪ್ರಕಟಿಸಲು ಮಲ್ಯರನ್ನು ಹಾಜರುಪಡಿಸಿ ಎಂದು ನ್ಯಾಯಾಲಯ ಪೊಲೀಸರಿಗೆ ಸೂಚಿಸಿತ್ತು. ಈ ಸಂಬಂಧ ವರದಿ ಸಲ್ಲಿಸಿರುವ ಪೊಲೀಸರು, ಹೊಸದಾಗಿ ವಾರೆಂಟ್ ಜಾರಿ ಮಾಡಲು ವಿಜಯ್ ಮಲ್ಯಾ ಅವರ ನಿಖರವಾದ ವಿಳಾಸವಿಲ್ಲ. ಇದ್ದ ಒಂದು ವಿಳಾಸವನ್ನು ಬ್ಯಾಂಕ್ ಜಪ್ತಿ ಮಾಡಿದೆ. ಹಾಗಾಗಿ, ಅವರಿಗೆ ವಾರೆಂಟ್ ಜಾರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ನ್ಯಾಯಾಲಯ ಜೂನ್ 6ಕ್ಕೆ ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿದ್ದು, ನಿಖರವಾದ ವಿಳಾಸ ಪತ್ತೆ ಹಚ್ಚಿ ಎಂದು ಪೊಲೀಸರಿಗೆ ಸೂಚಿಸಿದೆ.
ಮಲ್ಯ ವಿರುದ್ಧ ಎರಡು ಚೆಕ್ ಬೌನ್ಸ್ ಪ್ರಕರಣಗಳು ದಾಖಲಾಗಿತ್ತು. ನ್ಯಾಯಾಲಯ ಸೆಕ್ಷನ್ 138ರ ಅಡಿಯಲ್ಲಿ ಮಲ್ಯ, ಕಿಂಗ್ ಫಿಶರ್ ಹಾಗೂ ಏರ್ ಲೈನ್ಸ್ ಹಿರಿಯ ಅಧಿಕಾರಿಗಳು ತಪ್ಪಿತಸ್ಥರೆಂದು ತೀರ್ಪು ನೀಡಿತ್ತು. ಮೇ 5ಕ್ಕೆ ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗುವುದು ಎಂದು ತಿಳಿಸಿತ್ತು. ಆದರೆ ಮಲ್ಯ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ಶಿಕ್ಷೆಯ ಪ್ರಮಾಣ ಪ್ರಕಟಿಸಿರಲಿಲ್ಲ.
ಜಿಎಂಆರ್ ಹೈದರಾಬಾದ್ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿ.ಗೆ ನೀಡಿದ್ದ 50 ಲಕ್ಷ ರೂ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಈ ಮೊದಲು ಕಿಂಗ್‌ಫಿಶರ್ ಏರ್‌ಲೈನ್ಸ್, ಅದರ ಚೇರ್‌ಮೆನ್ ವಿಜಯ್ ಮಲ್ಯ ಹಾಗೂ ಕಂಪೆನಿಯ ಇನೊಬ್ಬ ಹಿರಿಯ ಅಧಿಕಾರಿಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು.
ಸುಮಾರು 9 ಸಾವಿರ ಕೋಟಿ ರು.ಗೂ ಅಧಿಕ ಸಾಲದ ಹೊರೆ ಹೊತ್ತಿರುವ ಮಲ್ಯ ಅವರು ಮಾರ್ಚ್ ತಿಂಗಳಿನಲ್ಲಿ ದೇಶ ಬಿಟ್ಟು ಇಂಗ್ಲೆಂಡಿಗೆ ಪರಾರಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics