ನವದೆಹಲಿ: ಹಗರಣಗಳ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಗೆ ಮೌನವಾಗಿದ್ದರೋ ಅದೇ ಮಾದರಿಯಲ್ಲಿ ಪ್ರಸ್ತುತ ಹಗರಣಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೌನವಾಗಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಟೀಕಿಸಿದ್ದಾರೆ.
ಹಗರಣಗಳ ಬಗ್ಗೆ ಮಾತನಾಡದ ಪ್ರಧಾನಿ ನರೇಂದ್ರ ಮೋದಿ ಅವರು ಮನಮೋಹನ್ ಸಿಂಗ್ ಅವರನ್ನು ಅನುಸರಿಸುತ್ತಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
2ಜಿ ಹಗರಣ, ಕಲ್ಲಿದ್ದಲು ಹಗರಣ ಸೇರಿದಂತೆ ಅನೇಕ ಭ್ರಷ್ಟಾಚಾರಗಳು ನಡೆದ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಅವರು ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ, ಹಗರಣದ ಬಗ್ಗೆ ಒಂದು ಪದಗಳನ್ನು ಆಡಿಲ್ಲ. ಅದೇ ರೀತಿ ನರೇಂದ್ರ ಮೋದಿ ಅವರ ಕಣ್ಣ ಮುಂದೆ ವ್ಯಾಪಂ ಮತ್ತು ಲಲಿತ್ ಮೋದಿ ಗೇಟ್ ಹಗರಣಗಳು ನಡೆದಿವೆ. ಆದರೆ ಅವರು ಕ್ರಮ ಕೈಗೊಳ್ಳದೇ ಸಿಂಗ್ ಮಾದರಿಯಲ್ಲೇ ಮೌನಿಯಾಗಿದ್ದಾರೆ ಎಂದು ಕೇಜ್ರಿವಾಲ್ ಆಪಾದಿಸಿದ್ದಾರೆ.
ನಾನು ಭ್ರಷ್ಟಾಚಾರವೆಸಗಿಲ್ಲ ಎಂದು ಮೋದಿ ಹೇಳುತ್ತಾರೆ. ಅದೇ ಪದಗಳನ್ನು ಮನಮೋಹನ್ ಸಿಂಗ್ ಅವರೂ ಬಳಸಿದ್ದರು. ಮನಮೋಹನ್ ಸಿಂಗ್ ಮಾದರಿಯಲ್ಲೇ ಮೋದಿಯೂ ಹಗರಣಗಳ ಕುರಿತು ಕಠಿಣ ಕ್ರಮ ಕೈಗೊಳ್ಳುವುದಿಲ್ಲ. ಹಳೇ ಪದ್ಧತಿಯೇ ಮುಂದುವರೆದಿದೆ. ಆಗ 2ಜಿ ಹಗರಣ, ಈಗ ವ್ಯಾಪಂ ಹಗರಣ. ಹಿಂದೆ ಕಲ್ಲಿದ್ದಲು ಹಗರಣ ಈಗ ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ. ಹಗರಣಗಳೂ ಒಂದೇ ಆದರೆ ಹೆಸರು ಮಾತ್ರ ಬೇರೆ ಎಂದು ಕೇಜ್ರಿವಾಲ್ ವ್ಯಂಗ್ಯವಾಡಿದ್ದಾರೆ.
ದೇಶದ ವಿದ್ಯಾರ್ಥಿಗಳು ಮೋದಿ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಪಸಂಖ್ಯಾತರು, ರೈತರು, ದಲಿತರು, ವ್ಯಾಪರಸ್ಥರು, ಉದ್ಯಮಿಗಳು ಸೇರಿದಂತೆ ಎಲ್ಲರೂ ಮೋದಿ ಕಾರ್ಯವೈಖರಿಯಿಂದ ಅಸಮಾಧಾನಗೊಂಡಿದ್ದಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics