ಭೋಪಾಲ್ ಕೇಂದ್ರ ಕಾರಾಗೃಹದ ಮುಂದೆ ಕಾವಲು ಕಾಯುತ್ತಿರುವ ಪೊಲೀಸ್ ಸಿಬ್ಬಂದಿ
ಭೋಪಾಲ್: ಎಂಟು ಮಂದಿ ಸಿಮಿ ಉಗ್ರರ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಧ್ಯ ಪ್ರದೇಶ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.
ತನಿಖಾ ಸಮಿತಿಯ ನೇತೃತ್ವವನ್ನು ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಎಸ್.ಕೆ.ಪಾಂಡೆ ವಹಿಸಲಿದ್ದಾರೆ. ಸಿಮಿ ಉಗ್ರರು ಜೈಲಿನಿಂದ ತಪ್ಪಿಸಿಕೊಂಡು ಪರಾರಿಯಾದ ಸಂದರ್ಭ ಮತ್ತು ಪೊಲೀಸರು ಅವರನ್ನು ಎನ್ ಕೌಂಟರ್ ನಲ್ಲಿ ಸಾಯಿಸಿದ್ದು ಮೊದಲಾದವುಗಳ ಬಗ್ಗೆ ತಂಡ ತನಿಖೆ ನಡೆಸಲಿದೆ.
ಎನ್ ಕೌಂಟರ್ ಬಗ್ಗೆ ವಿವರವಾದ ವರದಿ ನೀಡುವಂತೆ ಮಧ್ಯ ಪ್ರದೇಶ ಹೈಕೋರ್ಟ್ ನಿನ್ನೆ ರಾಜ್ಯ ಸರ್ಕಾರಕ್ಕೆ ನೊಟೀಸ್ ನೀಡಿತ್ತು. ಘಟನೆ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸಲಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಹಿಂದೆ ಘೋಷಿಸಿದ್ದರು. ಇನ್ನೊಂದೆಡೆ ರಾಜ್ಯ ಗೃಹ ಸಚಿವ ಭೂಪೇಂದ್ರ ಸಿಂಗ್, ಎನ್ ಕೌಂಟರ್ ಬಗ್ಗೆ ಯಾವುದೇ ತನಿಖೆಯ ಅಗತ್ಯವಿಲ್ಲ ಎಂದು ಹೇಳಿದ್ದರು.
ಭೋಪಾಲ್ ಕೇಂದ್ರ ಕಾರಾಗೃಹದ ಭದ್ರತಾ ಸಿಬ್ಬಂದಿ ರಾಮಶಂಕರ್ ಯಾದವ್ ಅವರನ್ನು ಕಳೆದ ಭಾನುವಾರ ಕೊಂದು ಎಂಟು ಮಂದಿ ಸಿಮಿ ಉಗ್ರರು ಜೈಲಿನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದರು. ನಂತರ ಕೆಲವೇ ಗಂಟೆಗಳಲ್ಲಿ ಅವರನ್ನು ಪೊಲೀಸರು ಎನ್ ಕೌಂಟರ್ ನಲ್ಲಿ ಕೊಂದು ಹಾಕಿದ್ದರು. ಈ ಘಟನೆ ಬಗ್ಗೆ ಹಲವು ಸಾಮಾಜಿಕ ಕಾರ್ಯಕರ್ತರು ಮತ್ತು ರಾಜಕೀಯ ಪಕ್ಷಗಳ ಮುಖಂಡರು ಸಂಶಯ, ಸಂದೇಹಗಳನ್ನು ವ್ಯಕ್ತಪಡಿಸಿದ್ದಾರೆ.