ದೇಶ

ಒಆರ್'ಒಪಿ ಆತ್ಮಹತ್ಯೆ ವಿವಾದ: ಕೇಂದ್ರದ ವಿರುದ್ಧ ಶತ್ರುಘ್ನ ಸಿನ್ಹಾ ಕಿಡಿ

Manjula VN

ನವದೆಹಲಿ: ಆತ್ಮಹತ್ಯೆ ಮಾಡಿಕೊಂಡ ಮಾಜಿ ಯೋಧನ ಕುಟುಂಬಸ್ಥರು ಹಾಗೂ ವಿರೋಧ ಪಕ್ಷದ ನಾಯಕರ ವಿರುದ್ಧ ದೆಹಲಿ ಪೊಲೀಸರು ತೆಗೆದುಕೊಂಡ ಕ್ರಮದ ವಿರುದ್ಧ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರು ಶನಿವಾರ ಕಿಡಿಕಾರಿದ್ದಾರೆ.

ಸಮಾನ ವೇತನ ಮತ್ತು ಸಮಾನ ಪಿಂಚಣಿ ಯೋಜನೆ ಜಾರಿಗೆ ಕೇಂದ್ರ ವಿಳಂಬ ನೀತಿಯನ್ನು ಅನುಸರಿಸುತ್ತಿದೆ ಎಂದು ಹೇಳಿ ಕೆಲ ದಿನಗಳ ಹಿಂದಷ್ಟೇ ಮಾಜಿ ಯೋಧ ರಾಮ್ ಕಿಶನ್ ಗ್ರೆವಾಲ್ ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದರು. ಯೋಧನ ಆತ್ಮಹತ್ಯೆಗೆ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಗಳು ವಿರೋಧವನ್ನು ವ್ಯಕ್ತಪಡಿಸಿದ್ದವು.

ಕೇಂದ್ರ ವರ್ತನೆಯನ್ನು ಖಂಡಿಸಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ದೆಹಲಿಯ ಜಂತರ್ ಮಂತರ್ ಹಾಗೂ ಇಂಡಿಯಾ ಗೇಟ್ ಬಳಿ ಪ್ರತಿಭಟನೆ ನಡೆಸಿದ್ದವು. ಈ ವೇಳೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು 2 ಬಾರಿ ದೆಹಲಿ ಪೊಲೀಸರು ಬಂಧನಕ್ಕೊಳಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಶತ್ರುಜ್ಞ ಸಿನ್ಹಾ ಅವರು, ಮಾಜಿ ಯೋಧನ ಆತ್ಮಹತ್ಯೆ ಪ್ರಕರಣದಲ್ಲಿ ದೆಹಲಿ ಪೊಲೀಸರು ಫ್ರೌಢತೆಯಿಂದ, ಸರಿಯಾದ ರೀತಿಯಲ್ಲಿ, ಪ್ರಾಯೋಗಿಕ ರೀತಿಯಲ್ಲಿ ಹಾಗೂ ನ್ಯಾಯೋಚಿತ ರೀತಿಯಲ್ಲಿ ನಡೆದುಕೊಂಡಿದ್ದರೆ ಉತ್ತಮವಾಗಿರುತ್ತಿತ್ತು ಎಂದಿದ್ದಾರೆ.

ಮಾಜಿ ಯೋಧನ ಆತ್ಮಹತ್ಯೆ ಬಳಿಕ ಅವರ ಕುಟುಂಬಸ್ಥರಿಗೆ ಅನುಕಂಪ ತೋರಿಸುವ ಬದಲು ಅವರ ಕುಟುಂಬಸ್ಥರಿಗೆ ಹೊಡೆಯಲಾಗಿದೆ. ಪೊಲೀಸ್ ಠಾಣೆಗೆ ಕರೆದೊಯ್ದು ಹೊಡೆಯಲಾಗಿದೆ. ಯೋಧನ ಕುಟುಂಬಸ್ಥರಿಗೆ ಬೆಂಬಲ ಸೂಚಿಸಿದ ಪ್ರತಿಪಕ್ಷದ ನಾಯಕರ ವಿರುದ್ಧವೂ ಕ್ರಮಕೈಗೊಳ್ಳಲಾಗಿದೆ. ಅವರನ್ನು ಬಂಧನಕ್ಕೊಳಪಡಿಸಲಾಗಿದೆ. ವಿರೋಧ ಪಕ್ಷದ ನಾಯಕರು ನಮ್ಮ ಶತ್ರುಗಳಲ್ಲ ಎಂಬುದು ನಮಗೇಕೆ ಅರ್ಥವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

ಇದೇ ವೇಳೆ ಸಮಾನ ವೇತನ ಹಾಗೂ ಸಮಾನ ಪಿಂಚಣಿ ಬಗ್ಗೆಯೂ ಟ್ವೀಟ್ ಮಾಡಿರುವ ಅವರು, ಸೇನೆಯ ಆಸಕ್ತಿಯಂತೆ ಸಮಾನ ವೇತನ ಮತ್ತು ಸಮಾನ ಪಿಂಜಣಿ ವಿಚಾರ ಸಂಬಂಧ ಶೀಘ್ರಗತಿಯಲ್ಲಿ ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

SCROLL FOR NEXT