ಲೆಹ್/ನವದೆಹಲಿ: ಲಡಾಕ್ ವಲಯದ ಸ್ಥಳೀಯ ಗ್ರಾಮಗಳಿಗೆ ನೀರಾವರಿ ಉದ್ದೇಶಕ್ಕಾಗಿ ಹಾಕಲಾಗುತ್ತಿದ್ದ ಪೈಪ್ ಲೈನ್ ಕಾಮಗಾರಿಯನ್ನು ಭಾರತೀಯ ಯೋಧರು ಪೂರ್ಣಗೊಳಿಸಿ ಚೀನಾ ಸೈನಿಕರಿಗೆ ಸೆಡ್ಡು ಹೊಡೆದಿದ್ದಾರೆ.
ಲಡಾಕ್ ನಲ್ಲಿ ಭಾರತ ನಡೆಸುತ್ತಿರುವ ಕಾಲುವೆ ನಿರ್ಮಾಣ ಕಾಮಗಾರಿಯನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ( ಪಿಎಲ್ ಎ) ತಡೆಯೊಡ್ಡಿತ್ತು. ಲಡಾಕ್ ನ ಡೆಮ್ ಚೋಕ್ ನ ಪ್ರದೇಶದ ಗ್ರಾಮಕ್ಕೆ ಕಾಲುವೆ ನೀರನ್ನು ಹರಿಸಲು ಭಾರತ ಸರ್ಕಾರ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಾಲುವೆ ನಿರ್ಮಾಣ ಮಾಡುತ್ತಿದೆ. ಆದರೆ ಇದಕ್ಕೆ ಚೀನಾ ಸೇನೆ ಸಿಬ್ಬಂದಿಗಳು ಅಡ್ಡಿ ಉಂಟು ಮಾಡಿದ್ದರು. ಇದರ ನಡುವೆ ಭಾರತೀಯ ಯೋಧರು ಪೈಪ್ ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಿದ್ದಾರೆ.
ಲೆಹ್ ನಿಂದ ಸುಮಾರು 250 ಕಿ.ಮೀ ದೂರದಲ್ಲಿರುವ ಡೆಮ್ ಚೋಕ್ ನಲ್ಲಿ ಭಾರತೀಯ ಭೂಸೇನಾ ಯೋಧರು ಹಾಗೂ ಇಂಜಿನಿಯರ್ ಸುಮಾರು 1 ಕಿ.ಮೀ ಉದ್ದದ ನೀರಾವರಿ ಪೈಪ್ ಲೈನ್ ಹಾಕಿದ್ದಾರೆ.